ವಿಡಿಯೋ ಹರಿಬಿಟ್ಟವರ ಬದಲು ರೇವಣ್ಣ ಸೆರೆ: ಜೆಡಿಎಸ್‌ನ ಕೆ.ಎಸ್. ಲಿಂಗೇಶ್

| Published : May 07 2024, 01:08 AM IST

ವಿಡಿಯೋ ಹರಿಬಿಟ್ಟವರ ಬದಲು ರೇವಣ್ಣ ಸೆರೆ: ಜೆಡಿಎಸ್‌ನ ಕೆ.ಎಸ್. ಲಿಂಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್ ವಿಡಿಯೋ ಹರಿಯಬಿಟ್ಟವರನ್ನು ಪತ್ತೆ ಮಾಡುವ ಬದಲು ತಮ್ಮ ಜೆಡಿಎಸ್ ನಾಯಕರಾದ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಬೇಸರ ವ್ಯಕ್ತಪಡಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ದಿಕ್ಕು ತಪ್ಪುತ್ತಿದೆ । ದುರುದ್ದೇಶದಿಂದ ರೇವಣ್ಣ ಬಂಧನ

ಕನ್ನಡಪ್ರಭ ವಾರ್ತೆ ಹಾಸನ

ಎಸ್‌ಐಟಿ ತನಿಖೆಗೆ ಸ್ವಾಗತಿಸುತ್ತೇವೆ, ಆದರೆ ಪೆನ್‌ಡ್ರೈವ್ ವಿಡಿಯೋ ಹರಿಯಬಿಟ್ಟವರನ್ನು ಪತ್ತೆ ಮಾಡುವ ಬದಲು ತಮ್ಮ ಜೆಡಿಎಸ್ ನಾಯಕರಾದ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಶಾಸಕರು, ಮಾಜಿ ಶಾಸಕರು ಹಾಗೂ ಪ್ರಮುಖರ ಸಭೆ ನಡೆಸಲಾಗಿದ್ದು, ಪೆನ್‌ಡ್ರೈವ್ ವಿಚಾರವಾಗಿ ಎಸ್‌ಐಟಿ ತನಿಖೆಗೆ ಸ್ವಾಗತ. ಆದರೆ ಈ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಅನಿಸುತ್ತಿದೆ. ಪೆನ್‌ಡ್ರೈವ್ ಹರಿಯಬಿಟ್ಟವರ ಪತ್ತೆ ಮಾಡುವ ಬದಲು ನಮ್ಮ ನಾಯಕರನ್ನು ಬಂಧಿಸಿದ್ದಾರೆ. ಮೊದಲ ಕೇಸ್‌ನಲ್ಲಿ ಏನೂ ಮಾಡಲು ಆಗಿಲ್ಲ ಎಂದು ಎರಡನೇ ಕೇಸ್ ದಾಖಲು ಮಾಡಲಾಗಿದೆ. ಕೆ.ಆರ್.ನಗರ ಶಾಸಕರ ಚಿತಾವಣೆಯಲ್ಲಿ ಕೇಸ್ ದಾಖಲಾಗಿದೆ. ಬೆಂಗಳೂರಿನ ದೇವೇಗೌಡರ ಮನೆಯಲ್ಲಿ ರೇವಣ್ಣ ಅಡಗಿದ್ದರು ಎನ್ನೋದು ಸುಳ್ಳು. ರೇವಣ್ಣ ಅವರು ಹಾಸನ ಜಿಲ್ಲೆಯ ಅಭಿವೃದ್ಧಿ ಮಾಡಿ ಜನರ ಮನಸ್ಸಿನಲ್ಲಿ ಇದ್ದಾರೆ. ಇವರನ್ನು ದುರುದ್ದೇಶದಿಂದ ಸಿಲುಕಿಸಲಾಗಿದೆ’ ಎಂದು ದೂರಿದರು.

‘ರೇವಣ್ಣ ಅವರನ್ನು ಬಂಧಿಸಿ ಇಡೋ ಅಗತ್ಯ ಇರಲಿಲ್ಲ. ಮನೆಯಲ್ಲಿ ಇದ್ದುಕೊಂಡೇ ತನಿಖೆಗೆ ಸಹಕಾರ ಕೊಡುತ್ತಿದ್ದರು. ಅಪಹರಣಕ್ಕೆ ಒಳಗಾದ ಮಹಿಳೆ ಕೂಡ ರೇವಣ್ಣ ಬಗ್ಗೆ ಏನು ಹೇಳಿಲ್ಲ. ಆದರೂ ಕೂಡ ಹತಾಶ ಭಾವನೆಯಿಂದ ಅವರ ಹೇಳಿಕೆಗೂ ಮೊದಲು ಬಂಧನ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ತೊಂದರೆ ನೀಡಿದರೆ ನಮ್ಮ ಪ್ರಭಾವ ಹೆಚ್ಚಾಗುತ್ತೆ ಎಂದುಕೊಂಡಿದ್ದರೆ ಸಾಧ್ಯವಿಲ್ಲ’ ಎಂದು ಹೇಳಿದರು.

‘ನಾವು ನಮ್ಮ ನಾಯಕರ ಜೊತೆ ಇದ್ದೇವೆ. ಸತ್ಯ ಹೊರ ಬರಬೇಕು. ರಾಜಕೀಯವಾಗಿ ತಮ್ಮದೇ ಪ್ರಭಾವ ಇರುವ ವ್ಯಕ್ತಿಯನ್ನು ತುಳಿಯಬೇಕೆಂದು ಹೀಗೆ ಮಾಡಲಾಗಿದೆ. ಇದನ್ನು ಜೆಡಿಎಸ್ ಖಂಡಿಸುತ್ತದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಪ್ರತಿಭಟನೆ ನಡೆಸಿಲ್ಲ’ ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಪೆನ್‌ಡ್ರೈವ್ ಅನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದು, ರೇವಣ್ಣ ಅವರು ಎಲ್ಲಿಯೂ ಅಡಗಿ ಕೂತಿಲ್ಲ. ಕೇಸ್ ದಾಖಲಾದಾಗಿನಿಂದಲೂ ಕೂಡ ಕ್ಷೇತ್ರದಲ್ಲಿ ಇದ್ದಾರೆ. ರೇವಣ್ಣ ಅವರ ಬಂಧನದ ಅವಶ್ಯಕತೆ ಇರಲಿಲ್ಲ. ವಿಚಾರಣೆಗೆ ಕರೆಯಬಹುದಿತ್ತು. ಕೂಡಲೇ ಎಸ್‌ಐಟಿ ರೇವಣ್ಣ ಅವರನ್ನು ಬಿಡುಗಡೆ ಮಾಡಬೇಕು. ಜಿಲ್ಲೆಗೆ, ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಶ್ಲೀಲ ವೀಡಿಯೋ ಹರಿಯಬಿಟ್ಟವರು ಯಾರು ಎನ್ನೋದು ಹೊರ ಬರಬೇಕು. ಇದು ಈ ಜಿಲ್ಲೆಯ ಹೆಣ್ಣುಮಕ್ಕಳ ಪ್ರಶ್ನೆಯಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.

‘ಎಸ್‌ಐಟಿ ರೇವಣ್ಣ ಅವರನ್ನು ನಡೆಸಿಕೊಳ್ತೀರೊ ರೀತಿ ಸರಿಯಿಲ್ಲ. ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠರೂ ಕೂಡ ಎಚ್ಚರಿಕೆ ವಹಿಸಬೇಕು. ಕೆಲವರು ವೀಡಿಯೋ ಇದೆ ಎಂದು ಬ್ಲಾಕ್ ಮೇಲ್ ಮಾಡುತ್ತಿರುವ ವರದಿ ಇದೆ. ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಕಠಿಣ ಕ್ರಮ ಆಗಲೇಬೇಕು. ಸಂಸದರು ತಪ್ಪಿತಸ್ಥರಿದ್ದರೆ ವಿದೇಶದಿಂದ ಕರೆತರಲಿ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ರೇವಣ್ಣ ಅವರನ್ನು ಕೂಡಲೆ ಬಿಡುಗಡೆ ಮಾಡಲಿ’ ಎಂದು ಒತ್ತಾಯಿಸಿದರು.

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಾಧ್ಯಮ ವಕ್ತಾರ ಹೊಂಗೆರೆ ರಘು, ಬ್ಯಾಂಕ್ ನಿರ್ದೇಶಕ ನಾಗರಾಜು ಇತರರು ಇದ್ದರು.