ವಿವಿ ಸಾಗರ ಮೇಲೆ ಹೊಸದುರ್ಗ ಹಕ್ಕು ಪ್ರತಿಪಾದನೆ ಆಂದೋಲನ

| Published : May 06 2024, 12:43 AM IST

ವಿವಿ ಸಾಗರ ಮೇಲೆ ಹೊಸದುರ್ಗ ಹಕ್ಕು ಪ್ರತಿಪಾದನೆ ಆಂದೋಲನ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಗೂಳಿಹಟ್ಟಿ ಶೇಖರ್ ರಿಂದ ಅರಿವು, ಜಾಗೃತಿ ಅಭಿಯಾನ । ಜೂ. 24 ರಿಂದ ಕಣಿವೆ ಮಾರಮ್ಮ ದೇವಸ್ಥಾನದಿಂದ ಚಾಲನೆ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹಿರಿಯೂರಿನ ಕೆಲ ಜಾತಿ ಸಂಘಟನೆ ಮುಖಂಡರು ಚಳ್ಳಕೆರೆ, ಮೊಳಕಾಲ್ಮುರು ತಾಲೂಕಿಗೆ ವಿವಿ ಸಾಗರ ಜಲಾಶಯದಿಂದ ನೀರು ಪೂರೈಕೆ ಮಾಡಲು ಆಕ್ಷೇಪ ವ್ಯಕ್ತಪಡಿಸುತ್ತಿರುವುದರ ನಡುವೆಯೇ ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾರಿಕಣಿವೆ ನೀರಿನ ಮೇಲೆ ಹಕ್ಕು ಪ್ರತಿಪಾದನೆ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಜನಾಂದೋಲನ ಸೃಷ್ಟಿಸಲು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.

ಹೊಸದುರ್ಗ ತಾಲೂಕಿಗೆ ವಿವಿ ಸಾಗರ ಜಲಾಶಯದಿಂದ ನೀರು ಪಡೆಯುವ ನಮ್ಮ ನೀರು ನಮ್ಮ ಹಕ್ಕು ಹೆಸರಿನಲ್ಲಿ ಹೋರಾಟದ ರೂಪು ರೇಷೆಗಳು ಸಿದ್ಧವಾಗಿದ್ದು ತಾಲೂಕಿನ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಜೂ. 24ರಂದು ಮುಹೂರ್ತ ನಿಗದಿ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟರ್ ಹರಿಬಿಟ್ಟಿದ್ದಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಗೂಳೀಹಟ್ಟಿ ಶೇಖರ್‌, ಇದುವರೆವಿಗೂ ವಿವಿಸಾಗರ ಜಲಾಶಯ ಹಿರಿಯೂರು ತಾಲೂಕಿಗೆ ಸೇರಿದ್ದು ಎನ್ನಲಾಗುತ್ತಿತ್ತು. ಅದರಂತೆ ದಾಖಲೆ ಸೃಷ್ಟಿಸಲಾಗಿತ್ತು. ಆದರೆ ಕಳೆದ ನನ್ನ ಅವಧಿಯಲ್ಲಿ ವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ವಿವಿಸಾಗರ ಡ್ಯಾಂ ಹೊಸದುರ್ಗಕ್ಕೆ ಸೇರಿದ್ದು ಎನ್ನುವ ಸತ್ಯ ಸಂಗತಿ ಜನರ ಮುಂದೆ ತಂದಿದ್ದೇನೆ. ಆದರೂ ಇನ್ನೂ ಈ ವಿಷಯವಾಗಿ ತಾಲೂಕಿನ ಜನರಿಗೆ ಮಾಹಿತಿಯ ಕೊರೆತೆಯಿದೆ. ಈ ಹಿನ್ನೆಲೆ ಅಭಿಯಾನದ ಮೂಲಕ ಡ್ಯಾಂನ ಹಕ್ಕುದಾರಿಕೆ ಹಾಗೂ ಅದರ ಅನುಕೂಲತೆ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕಿದೆ ಎಂದರು.

ಜೂ. 24ರಂದು ವಿವಿ ಸಾಗರ ಜಲಾಶಯದ ಡ್ಯಾಂ ಮುಂಭಾಗದಲ್ಲಿರುವ ಕಣಿವೆ ಮಾರಮ್ಮ ದೇವಾಲಯದಲ್ಲಿ ತಾಲೂಕಿನ ಜನರನ್ನು ಸೇರಿಸಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಅಂದು ಅಲ್ಲಿಂದ ವಾಹನಗಳ ಮೂಲಕ ಹೊಸದುರ್ಗಕ್ಕೆ ರ್‍ಯಾಲಿ ನಡೆಸಿ ದಾರಿ ಮಧ್ಯೆ ಬರುವ ಗ್ರಾಮಗಳಲ್ಲಿನ ದೇವಸ್ಥಾನ ಹಾಗೂ ಶಾಲಾ ಅವರಣದಲ್ಲಿ ಡ್ಯಾಂ ನಿಂದ ತರುವ ನೀರನ್ನು ಗಿಡಗಳಿಗೆ ಹಾಕುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ತಹಸೀಲ್ದಾರ್‌ ಕಚೇರಿ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನೀರು ಸಿಗುವವರೆಗೂ ಹೋರಾಟ: ಈ ಅಭಿಯಾನ ಒಂದು ದಿನಕ್ಕೆ ಸೀಮಿತವಾದುದಲ್ಲ. ಹೊಸದುರ್ಗದ ತಾಲೂಕಿನ ಬಳಕೆಗೆ ಕನಿಷ್ಠ 3 ಟಿಎಂಸಿ ನೀರು ಅಗತ್ಯವಿದ್ದು ಲಭ್ಯ ಆಗುವ ತನಕ ಹೋರಾಟ ಮುಂದುವರಿಸುತ್ತೇನೆ. ಮುಂದೆ ಹೋರಾಟದ ಆಯಾಮಗಳ ಬಗ್ಗೆ ತಾಲೂಕಿನ ಜನರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ. ಯಾವುದೇ ಕಾರಣಕ್ಕೂ ಡ್ಯಾಂ ನಿಂದ ನೀರು ಕಾಯ್ದಿರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾದಿಂದ ಮಳೆಗಾಲದಲ್ಲಿ ನೀರು ಹರಿಸಲಾಗುತ್ತದೆ. ಬೇಸಿಗೆಯಲ್ಲಿ ನಮಗೆ ನೀರು ಬೇಕು. ಭದ್ರಾದಲ್ಲೇ ನೀರು ಇಲ್ಲದಿರುವಾಗ ನಮಗೆ ಹೇಗೆ ನೀರು ಸಿಗಲು ಸಾಧ್ಯ. ವಿವಿ ಸಾಗರದ ಜಲಾಶಯದಲ್ಲಿ ನೀರು ಇದೆ. ಆದರೆ ಬಳಸಲು ನಮಗೆ ಯಾವುದೇ ಆಧಿಕಾರವಿಲ್ಲ ಎಂದರು. ನಮ್ಮ ನೀರು ನಮ್ಮ ಹಕ್ಕು ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ. ಇದು ನಮ್ಮ ಹಕ್ಕಿಗಾಗಿ ಮಾಡುತ್ತಿರುವ ಹೋರಾಟವಾಗಿದ್ದು ಪಕ್ಷಾತೀತವಾಗಿರಲಿದೆ. ನೆರೆ ತಾಲೂಕಿನವರು ವಿವಿ ಸಾಗರ ಜಲಾಶಯದಿಂದ ತಮ್ಮ ಹಕ್ಕು ಪ್ರತಿಪಾದಿಸಿ ನೀರು ಪಡೆದಿದ್ದಾರೆ. ಆದರೆ ನಮ್ಮದೇ ನೆಲ, ನಮ್ಮದೇ ರೈತರ ಜಮೀನು ಮುಳುಗಡೆಯಾಗಿ ಅನ್ಯಾಯವಾಗಿದೆ ಆದರೂ ನಮಗೆ ನೀರಿನ ಪಾಲಿಲ್ಲ. ಹಾಗಾಗಿ ಈ ಬಗ್ಗೆ ತಾಲೂಕಿನ ಜನರನ್ನು ಸಂಘಟಿಸಿ ಅವರಿಗೆ ಜಾಗೃತಿ ಮೂಡಿಸುವ ಮೂಲಕ ನಮ್ಮ ಪಾಲಿನ ಹಕ್ಕಿಗಾಗಿ ಮಾಡುವ ಹೋರಾಟ ಇದಾಗಿದೆ ಎಂದರು.