ಕೊಂಕಾಣಿದೊಡ್ಡಿ ಅಮ್ಮನವರ ದೇವಾಲಯದ ರಾಜಗೋಪುರ ಉದ್ಘಾಟನೆ

| Published : May 06 2024, 12:32 AM IST

ಕೊಂಕಾಣಿದೊಡ್ಡಿ ಅಮ್ಮನವರ ದೇವಾಲಯದ ರಾಜಗೋಪುರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಬ್ರಾಹ್ಮಿಮುಹೂರ್ತದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಬೆಳಿಗ್ಗೆ 5.30ರ ಶುಭಮುಹೂರ್ತದಲ್ಲಿ ಕಳಸ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ಪ್ರತಿಷ್ಠಾಪನಾ ಹೋಮ ಮತ್ತು ಪೂರ್ಣಾಹುತಿ 8.30 ಗಂಟೆಗೆ ಪೂರ್ಣ ಕುಂಬಾಭಿಷೇಕ, ಸ್ವಸ್ತಿವಾಚನ, ರಾಷ್ಟ್ರಾಶೀರ್ವಾದ ಮತ್ತು ಮಹಾಮಂಗಳಾರತಿ ನೆರವೇರಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಆದಿಶಕ್ತಿ ಅಮ್ಮನವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ರಾಮದೇವರಬೆಟ್ಟದ ರಸ್ತೆಯಲ್ಲಿರುವ ಕೊಂಕಾಣಿದೊಡ್ಡಿ ಗ್ರಾಮದ ಶ್ರೀ ಆದಿಶಕ್ತಿ ಅಮ್ಮನವರ ದೇವಾಲಯದ ನೂತನ ರಾಜಗೋಪುರ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.

ಆದಿಶಕ್ತಿ ದೇವಾಲಯದ ರಾಜಗೋಪುರ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ದೇವಾಲಯದಲ್ಲಿ ನಾನಾ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಮೇ.2ರಂದು ಗುರುವಾರ ಸಂಜೆ ಊರಿನ ಹೆಣ್ಣುಮಕ್ಕಳು ಮತ್ತು ಸುಮಂಗಲಿಯರೊಂದಿಗೆ ರಾಜಗೋಪುರ ಕಳಸದ ಉತ್ಸವ ಮೆರವಣಿಗೆ ಹಾಗೂ ಗಂಗಾಪೂಜೆ ನಂತರ ಮಹಾಸಂಕಲ್ಪ, ಗಣಪತಿಪೂಜೆ ಮತ್ತಿತರ ಪೂಜಾ ಕಾರ್ಯಗಳು ನೆರವೇರಿದವು. ಈ ವೇಳೆ ಕಲಾವಿದ ಡೊಳ್ ಚಂದ್ರು ತಂಡದವರು ಪೂಜಾ ಕುಣಿತ, ಡೊಳ್ಳುಕುಣಿತ ಮತ್ತು ವೀರಗಾಸೆಯನ್ನು ನಡೆಸಿಕೊಟ್ಟರು.

ಶುಕ್ರವಾರ ಬ್ರಾಹ್ಮಿಮುಹೂರ್ತದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಬೆಳಿಗ್ಗೆ 5.30ರ ಶುಭಮುಹೂರ್ತದಲ್ಲಿ ಕಳಸ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ಪ್ರತಿಷ್ಠಾಪನಾ ಹೋಮ ಮತ್ತು ಪೂರ್ಣಾಹುತಿ 8.30 ಗಂಟೆಗೆ ಪೂರ್ಣ ಕುಂಬಾಭಿಷೇಕ, ಸ್ವಸ್ತಿವಾಚನ, ರಾಷ್ಟ್ರಾಶೀರ್ವಾದ ಮತ್ತು ಮಹಾಮಂಗಳಾರತಿ ನೆರವೇರಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಆದಿಶಕ್ತಿ ಅಮ್ಮನವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಧಾರ್ಮಿಕ ಕೈಂಕರ್ಯದ ನಿಮಿತ್ತ ದೇವಾಲಯದ ಆವರಣದಲ್ಲಿ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೊಂಕಾಣಿದೊಡ್ಡಿ ಮಾತ್ರವಲ್ಲದೇ ಸುತ್ತಮುತ್ತಲ ಬಡಾವಣೆಗಳು, ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರಿಂದ ಗ್ರಾಮದಲ್ಲಿ ಜಾತ್ರೆ ಸ್ವರೂಪ ಪಡೆದುಕೊಂಡಿತ್ತು. ಸಂಜೆ ವೇಳೆಗೆ ಆದಿಶಕ್ತಿ ಅಮ್ಮನವರ ಉತ್ಸವ ಮೂರ್ತಿಯನ್ನು ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದೇವತೆ ಶ್ರೀ ಆದಿಶಕ್ತಿ ಅಮ್ಮನವರ ಸೇವಾ ಸಂಘದ ಅಧ್ಯಕ್ಷ ಪಿ.ಸಿದ್ದರಾಜು ಮಾತನಾಡಿ, ನಮ್ಮ ಪೂರ್ವಜರು ನೂರಾರು ವರ್ಷಗಳಿಂದ ಪೂಜಿಸುತ್ತಿದ್ದ ಆದಿಶಕ್ತಿ ಅಮ್ಮನವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಪ್ರತಿವರ್ಷವೂ ಜುಲೈ ತಿಂಗಳಲ್ಲಿ ನಡೆಯುವ ನಗರದ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ದಿನದಂದು ಇಲ್ಲಿಯೂ ಆದಿಶಕ್ತಿ ಅಮ್ಮನವರ ಕರಗವನ್ನು ನೆರವೇರಿಸುತ್ತೇವೆ.

ದೇವಾಲಯದ ಕುಂಬಾಭಿಷೇಕದ ಹಿನ್ನೆಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಅಮ್ಮನವರ ದರ್ಶನ ಮಾಡಿ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಇನ್ನೂ ತಂಡೋಪತಂಡವಾಗಿ ಭಕ್ತಾಧಿಗಳು ಬರುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ಒಗ್ಗಟ್ಟಿನಿಂದ ಪೂಜಾ ಕೈಂಕರ್ಯಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ದೇವಾಲಯದ ಅರ್ಚಕರಾದ ಮುನೀಂದ್ರ, ಗುರುರಾಜ್, ಹುಚ್ಚಯ್ಯ, ಸಂಘದ ಪದಾಧಿಕಾರಿಗಳು, ಗ್ರಾಮದ ಯಜಮಾನರು, ಕೊಂಕಾಣಿದೊಡ್ಡಿ ಗ್ರಾಮಸ್ಥರು ಸೇರಿ ಇತರರು ಪಾಲ್ಗೊಂಡಿದ್ದರು.