ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ನಿಶ್ಚಿತ: ಯಡಿಯೂರಪ್ಪ ವಿಶ್ವಾಸ

| Published : May 06 2024, 12:33 AM IST

ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ನಿಶ್ಚಿತ: ಯಡಿಯೂರಪ್ಪ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ 14ಕ್ಕೆ 14 ಕ್ಷೇತ್ರದಲ್ಲಿ ಗೆಲುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸದಿಂದ ನುಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಸೊರಬ

ಮೊದಲ ಹಂತದ ಚುನಾವಣೆಯಲ್ಲಿ ಶೇ.69.5ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಶೇ.80ರಷ್ಟು ಮತದಾನ ಆಗಿರುವುದು ನೋಡಿದರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಅನ್ನುವ ವಿಚಾರ ಗೋಚರವಾಗಿದೆ. ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ 14ಕ್ಕೆ 14 ಕ್ಷೇತ್ರದಲ್ಲಿ ಗೆಲುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಮೂರನೇ ಹಂತ ಹಾಗೂ ರಾಜ್ಯದಲ್ಲಿ ಎರಡನೇ ಹಂತ ಚುನಾವಣೆ ಮೇ 7 ಎಂದು ನಡೆಯಲಿದೆ. ಮೋದಿ ಐದು ಸಾರ್ವಜನಿಕ ಚುನಾವಣೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಮಿತ್ ಶಾ, ಅಣ್ಣಾಮಲೈ ಸೇರಿದಂತೆ ವಿವಿಧ ನಾಯಕರು ಭಾಗವಹಿಸಿದ್ದಾರೆ. 100ಕ್ಕೆ 100ರಷ್ಟು ರಾಜ್ಯದ 28ಕ್ಕೆ 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದರು.

ಸಿದ್ದರಾಮಯ್ಯ ಅವರು ವಿಧಾನಸಭೆಯ ಗುಂಗುನಿಂದ ಹೊರ ಬಂದಿಲ್ಲ. ಅವರಿಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ವಿಶ್ವಾಸಾರ್ಹ ನಾಯಕತ್ವ ಇಲ್ಲ. ಸರ್ಕಾರದ ಸಾಧನೆ ಬೆಂಬಲವಿಲ್ಲದೆ, ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಜನರನ್ನು ಜಾರಿತಪ್ಪಿಸಿ, ವಿವಾದ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಜನರ ಬೆಂಬಲ ಗಳಿಸುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ಮೋದಿಯ ಸಾಧನೆ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದರೆ. ಕಾಂಗ್ರೆಸ್ ಸುಳ್ಳಿನ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ಪ್ರಪಂಚದಲ್ಲಿ ಭಾರತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದರು.

ಕೇಂದ್ರದ ಬಗ್ಗೆ ಪ್ರಶ್ನೆ ಮಾಡುವ ಮೊದಲು ಉದ್ಯೋಗ ಸೃಷಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ದೇಶದಲ್ಲಿ 7 ಕೋಟಿ ಹೊಸ ಉದ್ಯೋಗ ಸೃಷ್ಟಿಸಲಾಗಿದೆ. ಬಿಜೆಪಿ ಆರ್ಟಿಕಲ್ 370 ರದ್ದುಪಡಿಸಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಅದನ್ನು ಮರು ಸ್ಥಾಪಿಸುವುದಾಗಿ ಹೇಳಿದೆ. ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ವರ್ಗದ ಜೀವನ ಕಷ್ಟಕರವಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಹನುಮಾನ್ ಚಾಲೀಸಾ ಹೇಳಿದವರ ಮೇಲೆ ದಾಳಿಯಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ 2ಜಿ ಸ್ಕ್ಯಾಮ್ ನಂತೆ ಹಲವು ಹಗರಣಗಳನ್ನು ಮಾಡಲು ಕನಸು ಕಾಣುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು, ಬೇಜವಾಬ್ದಾರಿ ಸರ್ಕಾರವಿದೆ. ಎಸ್ಸಿ, ಎಸ್ಟಿಗಳಿಗೆ ಸೇರಿದ 23,000 ಕೋಟಿ ಹಣವನ್ನು ರಾಜ್ಯ ಸರ್ಕಾರ ನುಂಗಿ ನೀರು ಕುಡಿದಿದೆ ಎಂದು ಕಿಡಿಕಾರಿದರು.

ಬೆಂಗಳೂರಿನ ರಾಮೇಶ್ವರಂ ಕಫೆ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್ಸಿಗರು ಸಿಲಿಂಡರ್ ಸ್ಫೋಟ ಎಂದು ನಾಮಕರಣ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸುಳ್ಳಿನ ಭಾಷಣ ಮಾಡುತ್ತಿದ್ದಾರೆ. ಕೋವಿಡ್ ಲಸಿಕೆ ಅಡ್ಡ ಪರಿಣಾಮದ ಹೆಸರಿನಲ್ಲಿ ಸುಳ್ಳು ಪ್ರಚಾರ ನಡೆಸಿದ್ದಾರೆ. ಕೋಟ್ಯಂತರ ಜೀವಗಳು ಉಳಿದಿದ್ದನ್ನು ಮರೆತಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ, ಮಲ್ಲಿಕಾರ್ಜುನ ಖರ್ಗೆ ಬಣ, ಡಿ.ಕೆ.ಶಿವಕುಮಾರ್ ಬಣ ಎಂದು ಮೂರು ಬಣಗಳಾಗಿದೆ. ರಾಹುಲ್ ಗಾಂಧಿ ಅಸ್ತಿತ್ವ ಉಳಿಸಿಕೊಳ್ಳಲು ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಕಳೆದ ಬಾರಿ ಆಮೆಥಿ ಸೋತು ಕೇರಳದ ವೈ ನಾಡು ಗೆ ವಲಸೆ ಹೋಗಿದ್ದರು. ಇದೀಗ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ರಾಜ್ಯದಲ್ಲಿ ಈ ಬಾರಿ 28ಕ್ಕೆ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಜನರು ತಲೆ ಕೆಡಿಸಿಕೊಂಡಿಲ್ಲ. ರಾಜ್ಯದಾದ್ಯಂತ ಪ್ರವಾಸ ಮಾಡಿದಾಗ ಸೇರಿರುವ ಜನಸ್ತೋಮ ಗ್ಯಾರೆಂಟಿ ಪರಿಣಾಮ ಬೀರಲ್ಲ ಎಂಬುದನ್ನು ತೋರಿಸುತ್ತಿದೆ. ಪ್ರತಿ ಸಭೆಗಳನ್ನು ನೂರಕ್ಕೆ ಎಪ್ಪತ್ತು ಭಾಗ ಮಹಿಳೆಯರೇ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಬಿಜೆಪಿ - ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಒಟ್ಟಾಗಿ ಒಂದಾಗಿ ಚುನಾವಣೆ ಗೆಲ್ಲುತ್ತೇವೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಏನಾಗಿದೆ ಎಂಬುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ದೇವೇಗೌಡರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಚುನಾವಣೆ ನಂತರ ರಾಜ್ಯ ಸರ್ಕಾರ ಪಥನ: ಬಿಎಸ್‌ವೈ

ಸೊರಬ: ಆರ್ಥಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯ ನಂತರ ಪಥನಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ತಮ್ಮ ಅಧಿಕಾರವಧಿಯಲ್ಲಿ ರೂಪಿಸಿದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಇಂದು ಬಡವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ನೀಡುತ್ತಿರುವ ೫ ಕೆಜಿ ಅಕ್ಕಿ ಕೇಂದ್ರದ ಬಿಜೆಪಿ ಸರ್ಕಾರದ್ದು. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಟೋಪಿ ಹಾಕುತ್ತಿದೆ. ಖಜಾನೆ ಖಾಲಿಯಾಗಿರುವುದರಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಚುನಾವಣೆ ನಂತರ ಸರ್ಕಾರದ ಬಂಡವಾಳ ಜನತೆಗೆ ತಿಳಿಯುತ್ತದೆ. ದೇಶದಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸುತ್ತೇವೆ. ನಂತರ ಕಾಂಗ್ರೆಸ್‌ಗೆ ಅಡ್ರಾಸ್ ಇಲ್ಲದಂತಾಗುತ್ತದೆ ಎಂದರು.ಕಾಂಗ್ರೆಸ್ ಹಣ, ಹೆಂಡ, ಜಾತಿ ಬಲದಿಂದ ಚುನಾವಣೆ ಮಾಡಲು ಹೊರಟ್ಟಿದ್ದು, ಜನತೆ ಇದಕ್ಕೆ ಮಣೆ ಹಾಕಬಾರದು. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ರಾಘವೇಂದ್ರ ಶಿವಮೊಗ್ಗದಲ್ಲಿ ಗೆಲುವು ಸಾಧಿಸುವುದು ಅಷ್ಟೇ ಸತ್ಯ. ತಾಲೂಕಿನಲ್ಲಿ ಕುಮಾರ ಬಂಗಾರಪ್ಪ ಅವರ ನೇತೃತ್ವದಲ್ಲಿ ೨೫ ಸಾವಿರಕ್ಕೂ ಅಧಿಕ ಮತಗಳು ಚಲಾವಣೆಯಾಗುತ್ತವೆ ಎಂದರು.

ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಬಿಜೆಪಿ ಸರ್ಕಾರ ಚಂದ್ರಗುತ್ತಿಯ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ೧.೫ ಕೋಟಿ ಹಣವನ್ನು ಈಗಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವುದು ನಾಚಿಕೆಗೇಡಿನ ವಿಷಯ ಹಿಂದಿನ ಯೋಜನೆಗಳನ್ನೂ ತಡೆಹಿಡಿಯಲಾಗಿದ್ದು, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ಆಗಿರುವ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆ ಎದುರಿಸುತ್ತೇವೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಡಿ.ಎನ್.ಜೀವರಾಜ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಭಾರತಿ ಶೆಟ್ಟಿ, ಮೈಸೂರು ಶಾಸಕ ಶ್ರೀವತ್ಸ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಚಿಕ್ಕಮಗಳೂರು ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಗಣಪತಿ ಟಿ.ಜಿ.ಕೊಪ್ಪ, ಬಿಜೆಪಿ ಮಹಿಳಾ ಅಧ್ಯಕ್ಷೆ ಹೊಳಿಯಮ್ಮ, ಜೆಡಿಎಸ್‌ನ ಕೆ.ಅಜ್ಜಪ್ಪ ಮತ್ತಿತರರಿದ್ದರು.