ಕನ್ನಡ ಸಾಹಿತ್ಯ ಸಂವರ್ಧನೆಗೆ ಶ್ರಮಿಸುತ್ತಿರುವ ಕಸಾಪ

| Published : May 07 2024, 01:03 AM IST

ಸಾರಾಂಶ

ಪರಿಷತ್ತು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ 110 ವರ್ಷಗಳಿಂದಲೂ ಕನ್ನಡ ಸಾಹಿತ್ಯ ಸಂವರ್ಧನೆಗಾಗಿ ಶ್ರಮಿಸುತ್ತಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಚೋರನೂರು ಟಿ.ಕೊಟ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಘಟಕದಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಷತ್ತು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಸಾಹಿತ್ಯ ಪರಿಷತ್ ಹೆಚ್ಚು ಸಕ್ರೀಯವಾಗಿ ಕೆಲಸ ಮಾಡುತ್ತಾ ಬಂದಿದೆ. ಇತ್ತೀಚೆಗೆ ಹೆಚ್ಚು ಹೆಚ್ಚು ಜನರು ಪರಿಷತ್‌ ನ ಚಟುವಟಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಹೆಚ್ಚು ಸಂತಸ ಮೂಡಿಸಿದೆ. ಬಳ್ಳಾರಿಯಂತಹ ಗಡಿ ಪ್ರದೇಶದಲ್ಲಿ ಕನ್ನಡ ಕೆಲಸಗಳು ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ. ಈ ನೆಲೆಯಲ್ಲಿ ಪರಿಷತ್ ನ ಕಾರ್ಯ ಶ್ಲಾಘನೀಯ ಎಂದು ಸ್ಮರಿಸಿದರು.

ಪರಿಷತ್ತು ನಡೆದು ಬಂದ ದಾರಿಯನ್ನು ಕುರಿತಾಗಿ ಶಿಕ್ಷಕ ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ‌ಡಾ. ನಿಷ್ಠಿ ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಮಾಜಿ ಅಧ್ಯಕ್ಷ ಎಚ್.‌ಹಂಪನಗೌಡ, ವಕೀಲ ಆರ್.ವೈ. ಹನುಮಂತರೆಡ್ಡಿ, ಕವಿಗಳಾದ ಮಾನ್ವಿ ಧನ್ವಂತರಿ, ಕಸಾಪ ಬಳ್ಳಾರಿ ತಾಲೂಕು ಅಧ್ಯಕ್ಷ ಕೆ.ವಿ. ನಾಗರೆಡ್ಡಿ, ಗ್ರಾಮೀಣ ಅಧ್ಯಕ್ಷ ಎಂ.ಯರ್ರಿಸ್ವಾಮಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರಾದ ಶೇಖ್ ರೆಹಮತ್ ಉಲ್ಲಾ ಮತ್ತು ಸಮಾಜ ಸೇವಕ ಡಿ.ಚಂದ್ರಶೇಖರ ಗೌಡ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಕಾರ್ಯಕ್ರಮ ನಿರೂಪಿಸಿದರು. ಡಾ.ಬಸವರಾಜ್ ಗದಗಿನ ಸ್ವಾಗತಿಸಿದರು. ಎಂ.ಯರ್ರಿಸ್ವಾಮಿ ವಂದಿಸಿದರು.