ಕರ್ನಾಟಕ ಏಕೀಕರಣಕ್ಕೆ ಕಸಾಪ ಕೊಡುಗೆ ಅನನ್ಯ: ಕೆ.ಕರೀಗೌಡ

| Published : May 06 2024, 12:33 AM IST

ಸಾರಾಂಶ

ನಾಡು-ನುಡಿ ಕುರಿತು ಅಭಿಮಾನ ಕಡಿಮೆಯಾಗುತ್ತಿದ್ದು, ಯುವಜನರಲ್ಲಿ ಕನ್ನಡ ಭಾಷೆಯ ಅಸ್ಮಿತೆ ಕುರಿತು ಅಭಿಮಾನ ಮೂಡಿಸುವ ಕೆಲಸ ಮಾಡಬೇಕಿದೆ. ಪಿಂಚಣಿ ಹಣದಲ್ಲಿ ಪರಿಷತ್ ನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದೇನೆ. ಪರಿಷತ್ತಿನ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಕರ್ನಾಟಕ ಏಕೀಕರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯವಾದುದು ಎಂದು ನಿವೃತ್ತ ಉಪನ್ಯಾಸಕ ಕೆ.ಕರೀಗೌಡ ಹೇಳಿದರು.

ನಗರದ ಕಸಾಪ ಕಚೇರಿ ಕಸಾಪ ಜಿಲ್ಲಾ ಮತ್ತು ರಾಮನಗರ ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, 1915ರಲ್ಲಿ ಮೈಸೂರು ಮಹಾರಾಜರಿಂದ ಕನ್ನಡದ ಅಸ್ಮಿತೆಯಾದ ಕರ್ನಾಟಕ ಸಾಹಿತ್ಯ ಪರಿಷತ್ ಉದಯವಾಯಿತು ಎಂದರು.

ಎಚ್.ಬಿ. ನಂಜುಂಡಯ್ಯ ಪರಿಷತ್‌ನ ಮೊದಲ ಅಧ್ಯಕ್ಷರಾಗಿದ್ದರು. ಮೂರು ಬಾರಿ ಅವರು ಹುದ್ದೆ ಅಲಂಕರಿಸಿದ್ದರು. ಮಹಾರಾಜರ ನಿಕಟವರ್ತಿ ಕೂಡ ಆಗಿದ್ದ ಇವರ ಮಾತೃಭಾಷೆ ತೆಲುಗು, ಉಪಾಧ್ಯಕ್ಷರ ಮಾತೃಭಾಷೆ ತಮಿಳು, ಆದರೂ ಕನ್ನಡದ ರಥವನ್ನು ಎಳೆಯಲು ಈ ಮಹನೀಯರು ಶ್ರಮಿಸಿದರು. ಇಲ್ಲಿಯವರೆಗೂ 87 ಸಮ್ಮೇಳನಗಳು ನಡೆದಿವೆ. 1915 ರಿಂದ 1940 ರ ವರೆಗೆ ಪರಿಷತ್‌ಗೆ ಅವಿರೋಧವಾಗಿ ಆಯ್ಕೆ ನಡೆಯುತ್ತಿತ್ತು ಎಂದು ತಿಳಿಸಿದರು.

ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಜಿ.ಎಚ್. ರಾಮಯ್ಯ, ನಾಡು- ನುಡಿ ಹೇಗೆ ಕಟ್ಟಬೇಕು ಎಂಬ ಆಲೋಚನೆಯೊಂದಿಗೆ ಪರಿಷತ್ ಸ್ಥಾಪನೆಯಾಗಿ ಜನಪದರು ಈ ನಾಡನ್ನು ಕಟ್ಟಿದರು ಎಂದು ಹೇಳಿದರು.

ಮಹಾರಾಜರ ಮುಂದಾಲೋಚನೆಯಿಂದಾಗಿ 1914ರಲ್ಲಿ ಎಕನಾಮಿಕ್ ಕಾನ್ಫರೆನ್ಸ್ ಸಮಿತಿ ರಚಿಸಿ ಅದಕ್ಕೆ ಮೂವರನ್ನು ನೇಮಿಸುತ್ತಾರೆ. ಆ ಸಮಿತಿಯು ನಾಡು-ನುಡಿ ಬೆಳೆಸುವ ಕುರಿತು ವರದಿಗೆ ಮಹಾರಾಜರು ಸೂಚಿಸುತ್ತಾರೆ. ಆ ವರದಿಯಲ್ಲಿ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ಜರುಗಬೇಕು ಮತ್ತು ಕರ್ನಾಟಕದಲ್ಲಿ ನಾಡು-ನುಡಿಗಾಗಿ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಬೇಕು ಎಂದು ವರದಿ ಹೇಳುತ್ತದೆ. ಆ ಮೇರೆಗೆ ಪರಿಷತ್ ಸ್ಥಾಪನೆಯಾಗಿ ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.

ಜಿಲ್ಲಾ ಲೇಖಕರ ವೇದಿಕೆ ಜಿಲ್ಲಾಧ್ಯಕ್ಷ ಕೂ.ಗಿ. ಗಿರಿಯಪ್ಪ ಮಾತನಾಡಿ, ನಾಡು-ನುಡಿ ಕುರಿತು ಅಭಿಮಾನ ಕಡಿಮೆಯಾಗುತ್ತಿದ್ದು, ಯುವಜನರಲ್ಲಿ ಕನ್ನಡ ಭಾಷೆಯ ಅಸ್ಮಿತೆ ಕುರಿತು ಅಭಿಮಾನ ಮೂಡಿಸುವ ಕೆಲಸ ಮಾಡಬೇಕಿದೆ. ಪಿಂಚಣಿ ಹಣದಲ್ಲಿ ಪರಿಷತ್ ನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದೇನೆ. ಪರಿಷತ್ತಿನ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.

ವಿಶ್ವಮಟ್ಟದಲ್ಲಿ ಕನ್ನಡದ ಕಂಪು ಹರಡಲು ಪರಿಷತ್ ಕಾರಣ: ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ , ಪರಿಷತ್ತು ಜನಸಾಮಾನ್ಯರ ದನಿಯಾಗಿ ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರಾತಿನಿಧಿಕ ಸಂಘಟನೆ. ಶತಮಾನ ದಾಟಿದರೂ ಇನ್ನೂ ಅದರ ಪ್ರಸ್ತುತತೆ ಮಂಕಾಗದೇ ಉಳಿದಿದೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿ ಇಷ್ಟು ಎತ್ತರಕ್ಕೆ ಜಿಗಿದ, ಇಷ್ಟು ದೂರಕ್ಕೆ ಹಾರಿದ ಮತ್ತೊಂದು ಸಂಸ್ಥೆ ಇಡೀ ವಿಶ್ವದಲ್ಲಿಲ್ಲ ಎಂದು ತಿಳಿಸಿದರು.

ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ ಹತ್ತಿರ ಹತ್ತಿರ ನಾಲ್ಕು ಲಕ್ಷ ಇದ್ದು, 109 ವರ್ಷ ವರ್ಷಗಳಲ್ಲಿ ವಾಮನತ್ವದಿಂದ ಆರಂಭಗೊಂಡ ಹೆಗ್ಗಳಿಕೆ ಪರಿಷತ್‌ಗೆ ಇದೆ. ಕೇಂದ್ರ ಕಚೇರಿಯ ಜತೆಗೆ ಕರ್ನಾಟಕದ ಎಲ್ಲ ಜಿಲ್ಲಾ, ತಾಲೂಕು, ದೆಹಲಿ ಮತ್ತು ಐದು ನೆರೆಯ ರಾಜ್ಯಗಳಲ್ಲಿ ಅಧಿಕೃತ ಘಟಕಗಳನ್ನು ಹೊಂದಿರುವ ಅನನ್ಯ ಸಂಸ್ಥೆಯಿದು. ಕನ್ನಡದ ಕಂಪನ್ನು ರಾಜ್ಯದಲ್ಲಿ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿ ಹರಡಲು ಪರಿಷತ್ ಕಾರಣವಾಗಿದೆ. ರಾಜ್ಯ ಮತ್ತು ಜಿಲ್ಲೆಗಳಲ್ಲಿ ದತ್ತಿನಿಧಿ ಸ್ಥಾಪಿಸಿ, ನಿಧಿ ಮೂಲಕ ತಮ್ಮ ಹೆಸರು ಪರಿಷತ್ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ ಜೊತೆಗೆ ರೈತರು, ಸೈನಿಕರು, ಅಂಗವಿಕಲರಿಗೆ ಸದಸ್ಯತ್ವ ನೀಡುವ ಕೆಲಸವನ್ನು ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ಕೋಶಾಧ್ಯಕ್ಷ ರಾಜೇಶ್ ಕವಣಾಪುರ, ರಾಮನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಟಿ.ದಿನೇಶ್, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ, ನಿಕಟಪೂರ್ವ ತಾಲೂಕು ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು, ತಾಲೂಕು ಸಂಚಾಲಕ ಬಿ.ಟಿ.ರಾಜೇಂದ್ರ, ಸಮದ್ ಮತ್ತಿತರರು ಉಪಸ್ಥಿತರಿದ್ದರು.

ಗೀತಗಾಯನವನ್ನು ಕೆಂಗಲ್ ವಿನಯಕುಮಾರ್, ಕೆ.ಎಚ್.ಕುಮಾರ್ ನಡೆಸಿಕೊಟ್ಟರು.