ಜನರಿಗೆ ಜಾಗೃತಿ ಮೂಡಿಸುವಲ್ಲಿ ಕಸಾಪ ಯಶಸ್ವಿ

| Published : May 06 2024, 12:33 AM IST

ಸಾರಾಂಶ

ಕಸಾಪ ಇಂದು ಸಮಾಜದ ಕಟ್ಟಕಡೆ ಜನರಲ್ಲೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಹಲವಾರು ದಶಕಗಳಿಂದ ಕನ್ನಡ ಭಾಷೆ ಸರ್ವತೋಮುಖ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಕೆಲಸ ಮಾಡುತ್ತಿದೆ. ಕೇವಲ ವಿದ್ವಾಂಸರಿಗೆ ಮಾತ್ರ ಸೀಮಿತವಾಗಿದ್ದ ಕಸಾಪ ಇಂದು ಸಮಾಜದ ಕಟ್ಟಕಡೆ ಜನರಲ್ಲೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.

ನಾಯಕನಹಟ್ಟಿ ವಿದ್ಯಾವಿಕಾಸ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಚಿತ್ರದುರ್ಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪಲು ಯಶಸ್ವಿಯಾಗಿದೆ. ಕನ್ನಡ ಭಾಷೆ ಬೆಳವಣಿಗೆ ಬಗ್ಗೆ ಎಲ್ಲರಲ್ಲೂ ಆತ್ಮವಿಶ್ವಾಸ ಮೂಡಿಸುವ ವಿಚಾರದಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ಕನ್ನಡ ನಾಡಿನಲ್ಲಿಯೇ ಭಾಷೆಯ ಉಳಿವಿನ ಬಗ್ಗೆ ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಿದೆ. ಅನ್ಯ ಭಾಷೆಗಳು ಕನ್ನಡ ಭಾಷೆಯ ಮೇಲೆ ಹೆಚ್ಚು ಸವಾರಿ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ನಾವೆಲ್ಲರೂ ಸಂಘಟಿತರಾಗಬೇಕು ಎಂದರು.

ಕನ್ನಡ ಪ್ರಾಧ್ಯಾಪಕ ಜಿ.ವಿ.ರಾಜಣ್ಣ ಉಪನ್ಯಾಸ ನೀಡಿ, ಕನ್ನಡದ ನೆಲದಲ್ಲಿಯೇ ಕನ್ನಡವನ್ನು ವೈಭವೀಕರಿಸುವ ವಿಚಾರದಲ್ಲಿ ನಾವ್ಯಾರೂ ಹಿಂದೆ ಬೀಳಬಾರದು. ಕನ್ನಡ ಬೆಳವಣಿಗೆ ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕು. ಅನ್ಯ ಭಾಷೆಯ ಉಪಯೋಗ ನಿಯಂತ್ರಣದಲ್ಲಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಹಿರಿಯ ಆಜೀವ ಸದಸ್ಯ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಪ.ಪಂ ಸದಸ್ಯ ಸೈಯದ್‌ ಅನ್ವರ್, ತಾಲೂಕು ಕಾರ್ಯದರ್ಶಿ ಕೆ.ಚಿತ್ತಯ್ಯ, ಕಸಾಪ ಹೋಬಳಿ ಘಟಕ ಅಧ್ಯಕ್ಷ ಬಿ.ಕಾಟಯ್ಯ, ಬಿ.ಎಂ.ತಿಪ್ಪೇರುದ್ರಸ್ವಾಮಿ, ಪಣಿಯಪ್ಪ, ಜಿ.ವೈ.ತಿಪ್ಪೇಸ್ವಾಮಿ, ಶರವಿ ಮಹಾಂತೇಶ್, ಟಿ.ರೂಪಾ, ಎ.ಉಮಾ ಮುಂತಾದವರು ಉಪಸ್ಥಿತರಿದ್ದರು.