ಕೋಟನೂರ್‌ ಪ್ರಕರಣ: ಎಸ್‌ಐಟಿ ತನಿಖೆಗೆ ಒಪ್ಪಿಸಲು ಜಾಧವ್‌ ಆಗ್ರಹ

| Published : May 05 2024, 02:09 AM IST

ಸಾರಾಂಶ

ಜ.23ರಂದು ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದ ಘಟನೆಯಿಂದ ಕೋಟನೂರು ಘಟನೆಯಲ್ಲಿ ನಡೆದ ದೌರ್ಜನ್ಯ ಪ್ರಕರಣದವರೆಗೂ ಕೂಲಂಕುಶವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಕೋಟನೂರು (ಡಿ) ಗ್ರಾಮದಲ್ಲಿ ರಾತೋರಾತ್ರಿ ಲಿಂಗಾಯಿತರ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐ ಟಿ) ರಚನೆ ಮಾಡಿ ನ್ಯಾಯ ಒದಗಿಸಬೇಕು ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.23ರಂದು ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದ ಘಟನೆಯಿಂದ ಕೋಟನೂರು ಘಟನೆಯಲ್ಲಿ ನಡೆದ ದೌರ್ಜನ್ಯ ಪ್ರಕರಣದವರೆಗೂ ಕೂಲಂಕುಶವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕೆಂದರು.

ಸಿಓಡಿ ತನಿಖೆಯಲ್ಲಿ ವಿಶ್ವಾಸವಿಲ್ಲ, ಮರಳು ಮಾಫಿಯಾದಿಂದ ಹತ್ಯೆಗಿಡಾದ ಜೇವರ್ಗಿ ಘಟನೆಯಲ್ಲಿ ಯಾವುದೇ ನ್ಯಾಯ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ 11 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಕ್ರಿಮಿನಲ್ ಚಟುವಟಿಕೆಗಳು ಹಾಗೂ ಹತ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡುವಂತೆ ಆಗ್ರಹಿಸಿದರು.

ಕೋಟನೂರು ಡಿ. ಘಟನೆಯಲ್ಲಿ ಆರೋಪಿಗಳೆನ್ನಲಾದವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಮೂರು ತಿಂಗಳು ಜೈಲುವಾಸ ಅನುಭವಿಸಿ ಕಾನೂನು ರೀತಿಯಲ್ಲಿ ಹೊರ ಬಂದರೂ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಸರಿಯಾದ ಸ್ಪಂದನೆ ನೀಡಲಿಲ್ಲ. ಅವರ ಬದುಕು ಬರ್ಬರವಾಗಿತ್ತು. ಬೇಡಿಕೊಂಡು ತಿನ್ನುವ ಪರಿಸ್ಥಿತಿ ಬಂದಿತ್ತು ಎಂದು ಆರೋಪಿಯ ತಂದೆ ತಮ್ಮ ಮುಂದೆ ದುಃಖ ತೋಡಿಕೊಂಡಿದ್ದಾರೆಂದು ಡಾ. ಜಾಧವ್‌ ಹೇಳಿದರು.

ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದು ಮನೆ ಸೇರುವ ಮೊದಲು ಗುಂಪಾಗಿ ಬಂದು ಅಮಾನುಷವಾಗಿ ಹಲ್ಲೆ ನಡೆಸಿದ್ದಲ್ಲದೆ ಮನೆಯ ಹೆಣ್ಣು ಮಕ್ಕಳ ಕೈಹಿಡಿದು ಎಳೆದು ಮಕ್ಕಳ ಮೇಲೆ ದೌರ್ಜನ್ಯ ವೆಸಗಿರುವುದು ಖಂಡನೀಯ. ಕಳೆದ 11 ತಿಂಗಳಲ್ಲಿ ಇಡೀ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ.

ಈ ಮಧ್ಯೆ ಮಹಾಗಾಂವ ಸಮೀಪದ ಲಾಡ್ ಮುಗುಳಿಯಲ್ಲಿ ಕುರುಬ ಸಮಾಜದ ಯುವಕನ ಆತ್ಮಹತ್ಯೆ ಪ್ರಕರಣ ಹಾಗೂ 14 ಮಂದಿಯ ಮೇಲೆ ದಲಿತ ನಿಂದನೆ (ಅಟ್ರಾಸಿಟಿ) ಮೊಕದ್ದಮೆ ಹೂಡಿ ಈಗ ಲಾಡ್ ಮುಗುಳಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಜನತೆ ಕಂಗಾಲಾಗಿದ್ದರೂ ಡಾಲರ್ಸ್ ಕಾಲೋನಿಯ ಮಂತ್ರಿ ಪ್ರಿಯಾಂಕ ಖರ್ಗೆ ಚುನಾವಣೆಯಲ್ಲಿ ತಮ್ಮ ಮಾವನನ್ನು ಗೆಲ್ಲಿಸಲು ಶತಾಯಗತಾಯ ಮಗ್ನರಾಗಿದ್ದಾರೆ. ಕಳೆದ ಕಳೆದ 11 ತಿಂಗಳಿಂದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದರು.

60 ವರ್ಷಗಳ ಆಡಳಿತದ ಮುಂದುವರಿದ ಭಾಗ ಇದಾಗಿದ್ದು ಬೆಣ್ಣೆ ತೊರೆ ಮತ್ತು ಬಲದಂಡೆ ಕಾಲುವೆಗಳಲ್ಲಿ ಅಕ್ರಮ ನಡೆದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಜನತೆಗೆ ರಕ್ಷಣೆ ಇಲ್ಲದಾಗಿದೆ. ಇಷ್ಟಾದರೂ ಲಿಂಗಾಯತ,ಕುರುಬ ಸಮಾಜದ ಮೇಲೆ ನಡೆದ ದೌರ್ಜನ್ಯ ಘಟನೆಗಳ ಬಗ್ಗೆ ಪ್ರಿಯಾಂಕ ಖರ್ಗೆ ಗಂಭೀರವಾಗಿ ಸ್ಪಂದಿಸದೆ ಚುನಾವಣೆ ನಡೆಸುವುದರಲ್ಲಿ ನಿರತರಾಗಿದ್ದಾರೆ. ಈಗ ಕೇವಲ ಸಿಓಡಿಗೆ ಗೆ ಒಪ್ಪಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ದೂರಿದರು.

ಉಸ್ತುವಾರಿ ಸಚಿವರ ಹಾಗೂ ಸರಕಾರದ ನಿರ್ಲಕ್ಷ್ಯ ಧೋರಣೆಗೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ಕಾಂಗ್ರೆಸ್‌ನ 11 ತಿಂಗಳ ಆಡಳಿತದಲ್ಲಿ ಅಶಾಂತಿಯ ಸಮಾಜ ಸೃಷ್ಟಿಯಾಗಿದೆ. ಹತ್ತು ವರ್ಷಗಳಲ್ಲಿ ನಾನೇ ಶಾಸಕನಾಗಿದ್ದು ಇಂತಹ ಒಂದೇ ಒಂದು ಇಂತಹ ಘಟನೆಗಳು ಸಂಭವಿಸದೆ ಬಂದ್ , ಹೋರಾಟ ನಡೆಯದೆ ಶಾಂತಿಯುತವಾಗಿದ್ದ ಕಲಬುರಗಿ ದಕ್ಷಿಣದಲ್ಲಿ ಈಗ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ದೂರಿದರು.

ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸಮಾಜ ಬಾಂಧವರ ರಕ್ಷಣೆಗಾಗಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ಸಂಪೂರ್ಣ ಬೆಂಬಲವಿದ್ದು ರಕ್ಷಣೆ ನೀಡಲು ಸದಾ ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಶಶಿಲ್ ಜಿ ನಮೋಶಿ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕೋಟನೂರು (ಡಿ) ಘಟನೆಯಲ್ಲಿ ಭಾಗಿಯಾದ ಆರೋಪಿಗಳಲ್ಲಿ ಕೆಲವರನ್ನು ಕೈ ಬಿಟ್ಟಿರುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಕಠಿಣ ಕಲಂ ಗಳನ್ನು ಸೇರಿಸದೆ ಎಫ್ಐಆರ್ ಹಾಕಿರುವ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಚುನಾವಣೆಯಲ್ಲಿ ಕರ್ತವ್ಯ ನಿರತರಾದ ಶಿಕ್ಷಕರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡದೆ ಅವರನ್ನು ಮತ ವಂಚಿತರನ್ನಾಗಿಸುವ ಕ್ರಮಕ್ಕೆ ಅವರು ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಅಳಂದ ಚಿಂಚೋಳಿ ಭಾಗದಲ್ಲಿ ಕೆಲಸ ಮಾಡುವ ಕಲಬುರ್ಗಿಯ ಶಿಕ್ಷಕರಿಗೆ ಚುನಾವಣಾ ಕರ್ತವ್ಯ ಪತ್ರವನ್ನು ನೀಡಿ ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ಶಿವಕಾಂತ್ ಮಹಾಜನ್ ಉಪಸ್ಥಿತರಿದ್ದರು.