ಕಾಂಗ್ರೆಸ್‌ ಬೆಂಬಲಿಸಲು ವಿಶ್ವಕರ್ಮ ಸಮುದಾಯಕ್ಕೆ ಕೆ.ಪಿ. ನಂಜುಂಡಿ ಕರೆ

| Published : May 06 2024, 12:30 AM IST

ಕಾಂಗ್ರೆಸ್‌ ಬೆಂಬಲಿಸಲು ವಿಶ್ವಕರ್ಮ ಸಮುದಾಯಕ್ಕೆ ಕೆ.ಪಿ. ನಂಜುಂಡಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಲ್ಲಿ ಕೇವಲ ನನಗೆ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಕೈ ಕಟ್ಟಿ ಹಾಕಿದರು ಸಮುದಾಯ ಸಮಸ್ಯೆಗಳಿಗೆ ಸ್ಪಂದಿಸಿಯೇ ಇಲ್ಲ, ಮತ್ತು ಸಮುದಾಯದವರಿಗೆ ಗೌರವ ನೀಡದಿರುವುದರಿಂದ ಮತ್ತೆ ತವರು ಪಕ್ಷ ಕಾಂಗ್ರೆಸ್‌ಗೆ ಬಂದಿದ್ದೇನೆ: ಕೆ.ಪಿ. ನಂಜುಂಡಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ ೨೫ ವರ್ಷಗಳಿಂದ ಹಿಂದುಳಿದ ವರ್ಗಗಳ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತಾ ಬಂದಿರುವ ನಾನು ವಾಸ್ತವ ಸ್ಥಿತಿಗತಿ ಅರಿಯದೆ ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದ್ದೆ. ಆದರೆ ಬಿಜೆಪಿಯಲ್ಲಿ ಕೇವಲ ನನಗೆ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಕೈ ಕಟ್ಟಿ ಹಾಕಿದರು ಸಮುದಾಯ ಸಮಸ್ಯೆಗಳಿಗೆ ಸ್ಪಂದಿಸಿಯೇ ಇಲ್ಲ, ಮತ್ತು ಸಮುದಾಯದವರಿಗೆ ಗೌರವ ನೀಡದಿರುವುದರಿಂದ ಮತ್ತೆ ತವರು ಪಕ್ಷ ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ತಿಳಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪ್ರಥಮಬಾರಿಗೆ ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,

ಹಿಂದುಳಿದ ವರ್ಗಗಳಲ್ಲಿ ೧೯೭ ಜಾತಿಗಳಿವೆ ಅದರಲ್ಲಿ ೭೪೪ ಉಪಜಾತಿಗಳಿವೆ ಅದರಲ್ಲಿ ವಿಶ್ವಕರ್ಮವು ಒಂದು, ವಿಶ್ವಕರ್ಮ ಅದೊಂದು ಜಾತಿ ಅಲ್ಲ, ಅದು ಒಂದು ಸಂಸ್ಕೃತಿ ಎಂದು ತಿಳಿಸಿದ ಅವರು, ನಮ್ಮ ಸಂಸ್ಕೃತಿ ಇಡೀ ದೇಶಾದ್ಯಂತ ನಿರ್ಮಾಣವಾಗಿರುವ ದೇವಸ್ಥಾನಗಳಲ್ಲಿ ರಾರಾಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಸಮುದಾಯದ ಸಮಸ್ಯೆಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವಸಮುದಾಯಕ್ಕೂ ನ್ಯಾಯ ಸಿಗುತ್ತದೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದ್ದರಿಂದ ವಿಶ್ವಕರ್ಮ ಸಮುದಾಯ ಸೇರಿದಂತೆ ೧೯೭ ಜಾತಿಗಳು ಸಹ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ನಮ್ಮ ನೋವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಿದರು.

ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯವರು ಭಾವನಾತ್ಮಕವಾಗಿ ಮಾತನಾಡಿ, ನಮ್ಮ ಮತಪಡೆಯಲು ಯತ್ನಿಸುತ್ತಾರೆ ಆದರೆ ಸಮಾಜ ಬಾಂಧವರು ಅದನ್ನು ನಂಬದೆ ಕಾಂಗ್ರೆಸ್ಸಿಗೆ ಬೆಂಬಲಿಸುವ ಮೂಲಕ ಸಾಮಾಜಿಕ ನ್ಯಾಯಪಡೆಯಲು ಮುಂದಾಗಬೇಕೆಂದು ಮನವಿ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದಿಕಾರಕ್ಕೆ ಬರುವ ಮುನ್ನ ದೇಶದ ಮಹಿಳೆಯರಿಗೆ ಸಿಲಿಂಡರ್‌ಗೆ, ರೈತರಿಗೆ ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ ಹಾಗೂ ಸಾರ್ವಜನಿಕರಿಗೆ ತಮ್ಮ ಖಾತೆಗಳಿಗೆ ಹಣ ಹಾಕುವ ಭರವಸೆ ನೀಡಿದ್ದರು. ಆದರೆ ಅದು ಯಾವುದು ಇಂದಿಗೂ ಈಡೇರಿಲ್ಲ.

ಬಿಜೆಪಿ ಅದಿಕಾರಕ್ಕೆ ಬಂದರೆ ಇವುಗಳೆಲ್ಲವು ಈಡೇರಿಸಲಿದ್ದೇವೆ ಎಂದು ಹೇಳಿದ್ದರು, ಅದಿಕಾರಕ್ಕೆ ಬಂದು ೧೦ ವರ್ಷವಾದರು ಒಂದನ್ನಾದರೂ ಈಡೇರಿಸಿಲ್ಲ ಮತ್ತೇ ಮೂರನೇ ಬಾರಿ ಪ್ತಧಾನಿ ಅಂತ ಹೊರಟಿದ್ದಾರೆ. ಜನ ಇವರ ಡೋಂಗಿತನ ಆರೀತಿದಾರೆ, ಹೀಗಾಗಿ ಸದಾ ಬಡವರ ಪರ ಚಿಂತನೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದರು.

ಪಕ್ಷದ ರಾಜ್ಯ ಸರ್ಕಾಟ ಜಾರಿ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರ ಅನುಕೂಲಕ್ಕೆ ಬಂದಿವೆ,ಹೀಗಾಗಿ ಹೆಚ್ಚು ಜನ ಕಾಂಗ್ರೆಸ್ ಪರ ನಿಲ್ಲಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸೈಯಿದ್ ಅಹ್ಮದ್, ಸಂತೋಷ, ನಂದಕುಮಾರ ಮಾಲೀಪಾಟೀಲ, ಲೋಹಿತಕುಮಾರ ಸೇರಿದಂತೆ ಹಲವರು ಇದ್ದರು.