ರಾಜಕಾಲುವೆ ಒತ್ತುವರಿಯ ತೆರವಿಗೆ ಸಮನ್ವಯ ಕೊರತೆ

| Published : May 07 2024, 02:01 AM IST / Updated: May 07 2024, 11:59 AM IST

Rajakaluve

ಸಾರಾಂಶ

ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದ್ದ ಬಿಬಿಎಂಪಿಗೆ ಕಂದಾಯ ಇಲಾಖೆಯಿಂದ ಸಮರ್ಪಕ ನೆರವು ಸಿಗದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ.

 ಬೆಂಗಳೂರು :  ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದ್ದ ಬಿಬಿಎಂಪಿಗೆ ಕಂದಾಯ ಇಲಾಖೆಯಿಂದ ಸಮರ್ಪಕ ನೆರವು ಸಿಗದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ.

ಪ್ರತಿ ಮಳೆಗಾಲದ ಸಂದರ್ಭದಲ್ಲಿ ರಾಜಕಾಲುವೆ ಒತ್ತುವರಿಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಮುನ್ನವೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಆದರೆ, ಒತ್ತುವರಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸಿದ್ಧಪಡಿಸಿರುವ ಪಟ್ಟಿಯನ್ನು ಪರಿಶೀಲಿಸಿ, ಒತ್ತುವರಿಯನ್ನು ದೃಢಪಡಿಸಬೇಕಾದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳು ಮಾತ್ರ ಬಿಬಿಎಂಪಿಗೆ ನೆರವು ನೀಡುತ್ತಿಲ್ಲ. ಪ್ರಮುಖವಾಗಿ ಒತ್ತುವರಿ ಜಾಗ ಸರ್ವೇ ನಡೆಸಿ, ಅದನ್ನು ದೃಢಪಡಿಸುವುದು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿ ತೆರವಿಗೆ ಬಿಬಿಎಂಪಿಗೆ ಶಿಫಾರಸು ಮಾಡುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಇನ್ನೂ 100ಕ್ಕೂ ಹೆಚ್ಚಿನ ಒತ್ತುವರಿ ತೆರವು ಮಾಡಲು ಆಗುತ್ತಿಲ್ಲ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ರಾಜಕಾಲುವೆ ಒತ್ತುವರಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಹೈಕೋರ್ಟ್‌ಗೆ ಸಲ್ಲಿಸಬೇಕಿದೆ. ಅಲ್ಲದೆ, ಒತ್ತುವರಿದಾರರ ಪಟ್ಟಿ ಸಿದ್ಧಪಡಿಸಿ, ಒತ್ತುವರಿ ಅಂತಿಮಗೊಳಿಸುವ ಜವಾಬ್ದಾರಿ ಕಂದಾಯ ಇಲಾಖೆ ವಿಶೇಷ ಜಿಲ್ಲಾಧಿಕಾರಿಗಳಿಗಿದೆ. ಆದರೆ, ಈವರೆಗೆ ಸರ್ವೇ ಸೇರಿದಂತೆ ಇನ್ನಿತರ ಕಾರ್ಯಗಳು ಸಮರ್ಪಕವಾಗಿ ಆಗದ ಕಾರಣ, ಒತ್ತುವರಿ ತೆರವು ಮಾಡಲು ಸಾಧ್ಯವಾಗಿಲ್ಲ ಎಂದರು.

ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಆಗುತ್ತಿರುವ ವಿಳಂಬ ಕುರಿತಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಲಾಗುವುದು. ಮಳೆಗಾಲಕ್ಕೂ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.