ಬಳ್ಳಾರಿಯಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರ ಅಬ್ಬರದ ಪ್ರಚಾರ

| Published : May 05 2024, 02:01 AM IST

ಸಾರಾಂಶ

ಸಚಿವ ನಾಗೇಂದ್ರ ಗ್ರಾಮೀಣ ಕ್ಷೇತ್ರದ ಮೋಕಾ, ಬಂಡಿಹಟ್ಟಿ, ಬಳ್ಳಾರಿ ನಗರ ವ್ಯಾಪ್ತಿಯ 39ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪರ ಪ್ರಚಾರ ಕೈಗೊಂಡರು.

ಬಳ್ಳಾರಿ: ಇಲ್ಲಿನ ಬಳ್ಳಾರಿ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆ ಬೀಳುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕ್ಷೇತ್ರದ ನಾನಾ ಕಡೆ ಶನಿವಾರ ಅಬ್ಬರದ ಪ್ರಚಾರ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸೇರಿದಂತೆ ಆಯಾ ಕ್ಷೇತ್ರದ ಶಾಸಕರು ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಎರಡನೇ ಹಂತದ ನಾಯಕರು ವಿವಿಧ ವಾರ್ಡ್ ಗಳು ಹಾಗೂ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತಯಾಚಿಸಿದರು.

ಸಚಿವ ನಾಗೇಂದ್ರ ಗ್ರಾಮೀಣ ಕ್ಷೇತ್ರದ ಮೋಕಾ, ಬಂಡಿಹಟ್ಟಿ, ಬಳ್ಳಾರಿ ನಗರ ವ್ಯಾಪ್ತಿಯ 39ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪರ ಪ್ರಚಾರ ಕೈಗೊಂಡರು.

ನಗರ ಶಾಸಕ ನಾರಾ ಭರತ್ ರೆಡ್ಡಿ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ಕೈಗೊಂಡಿದ್ದರು. ಕಳೆದ ಹತ್ತಾರು ದಿನಗಳಿಂದ ಬಿರುಸಿನ ಪ್ರಚಾರ ನಡೆಸಿರುವ ಭರತ್ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾಯಿಸುವ ಮೂಲಕ ಜಿಲ್ಲೆಯ ಪ್ರಗತಿಗೆ ಕೈ ಜೋಡಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ 35ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಮತಯಾಚಿಸಿದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಕಾಂಗ್ರೆಸ್ ಅಭ್ಯರ್ಥಿ ಪರ ನಗರದ 6ನೇ ವಾರ್ಡ್‌ನ ಬಳ್ಳಾರಪ್ಪ ಕಾಲೊನಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು. ಮುಖಂಡರಾದ ವೆಂಕಟೇಶ್ ಹೆಗಡೆ, ಪದ್ಮಾರೋಜಾ, ಬಾಪೂಜಿ ವೆಂಕಟೇಶಲು ಇತರರಿದ್ದರು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಅಲುವೇಲು ಶ್ರೀನಿವಾಸ್ ಅವರು 21ನೇ ವಾರ್ಡ್‌ನಲ್ಲಿ ಪ್ರಚಾರ ನಡೆಸಿ, ಮತಯಾಚಿಸಿದರು.

ಪ್ರಚಾರ ಭರಾಟೆಯಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ನಗರದ ನಾನಾ ಕಡೆ ಬಿರುಸಿನ ಸಂಚಾರ ನಡೆಸಿ, ಮತಯಾಚನೆ ನಡೆಸಿದರು. ಹತ್ತಾರು ಬೆಂಬಲಿಗರೊಂದಿಗೆ ನಗರದ ನಾನಾ ಕಡೆ ಓಡಾಡುತ್ತಿರುವ ಸೋಮಶೇಖರ ರೆಡ್ಡಿ, ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ಜಿಲ್ಲಾ ಪ್ರಮುಖರಾದ ಎಚ್.ಹನುಮಂತಪ್ಪ, ಎಸ್.ಗುರುಲಿಂಗನಗೌಡ, ಡಾ.ಮಹಿಪಾಲ್, ಎಸ್ಸಿ ಮೋರ್ಚಾದ ರಾಜೇಶ್, ಮಾಜಿ ಬುಡಾ ಅಧ್ಯಕ್ಷ ಮಾರುತಿಪ್ರಸಾದ್ ಅವರು ನಗರದ ನಾನಾ ಕಡೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.