ನೈತಿಕತೆ, ನಿಖರತೆ ಜೊತೆ ಮಾಧ್ಯಮ ವೃತ್ತಿಬದ್ಧತೆ ಅಗತ್ಯ: ಲಕ್ಷ್ಮಿ ಮಚ್ಚಿನ

| Published : May 07 2024, 01:01 AM IST

ನೈತಿಕತೆ, ನಿಖರತೆ ಜೊತೆ ಮಾಧ್ಯಮ ವೃತ್ತಿಬದ್ಧತೆ ಅಗತ್ಯ: ಲಕ್ಷ್ಮಿ ಮಚ್ಚಿನ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆಯ ಎಸ್‍ಡಿಎಂ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶನಿವಾರ ಆಯೋಜಿಸಿದ್ದ ಕದಂಬೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ನಡೆಸುವ ಪ್ರಾಯೋಗಿಕ ಮಾಸ ಪತ್ರಿಕೆ ‘ಕದಂಬ’ದ 6ನೇ ಸಂಚಿಕೆಯನ್ನು ಪತ್ರಕರ್ತ ಲಕ್ಷ್ಮಿ ಮಚ್ಚಿನ ಬಿಡುಗಡೆಗೊಳಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಹೊಸ ಕಾಲಘಟ್ಟದಲ್ಲಿ ತಾಂತ್ರಿಕ ಆವಿಷ್ಕಾರಗಳ ನೆರವಿನೊಂದಿಗೆ ನೂತನ ಮಾಧ್ಯಮಗಳ ಪ್ರಭಾವ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಿಂದಿನ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳು ಕಾಯ್ದುಕೊಂಡಿದ್ದ ನೈತಿಕತೆ ಹಾಗೂ ನಿಖರತೆಯ ಮೌಲ್ಯಗಳಿಗನುಗುಣವಾದ ವೃತ್ತಿಬದ್ಧತೆ ಮುಂದುವರಿಯಬೇಕು ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಅಭಿಪ್ರಾಯಪಟ್ಟರು.

ಉಜಿರೆಯ ಎಸ್‍ಡಿಎಂ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶನಿವಾರ ಆಯೋಜಿಸಿದ್ದ ಕದಂಬೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ನಡೆಸುವ ಪ್ರಾಯೋಗಿಕ ಮಾಸ ಪತ್ರಿಕೆ ‘ಕದಂಬ’ದ 6ನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಈಗ ಸುದ್ದಿಯ ಪ್ರಸರಣೆಯ ವೇಗ ತೀವ್ರಗೊಂಡಿದೆ. ಇದರೊಂದಿಗೆ ತಾಂತ್ರಿಕತೆಯ ನೂತನ ಪ್ರಯೋಜನಗಳು ಸುದ್ದಿಯ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಿವೆ. ಇಂಥ ಸಂದರ್ಭದಲ್ಲಿ ಈ ಹಿಂದೆ ದಿನಪತ್ರಿಕೆಯಂತಹ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳು ಅನುಸರಿಸುತ್ತಿದ್ದ ವಸ್ತುನಿಷ್ಠತೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸವಾಲು ಎದುರಾಗಿದೆ. ಈ ಸವಾಲನ್ನು ನಿಖರತೆ ಮತ್ತು ನೈತಿಕ ಪ್ರಜ್ಞೆಯೊಂದಿಗೆ ಸಮರ್ಥವಾಗಿ ಯುವ ವರದಿಗಾರರು ನಿಭಾಯಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಈ ಹಿಂದೆ ಕಾಲೇಜಿನಲ್ಲಿ ಪ್ರಾಯೋಗಿಕ ಪತ್ರಿಕೆಗಳನ್ನು ನಡೆಸಿದ್ದವರೆಲ್ಲರೂ ಪತ್ರಿಕಾರಂಗದಲ್ಲಿ ಉನ್ನತಿ ಸಾಧಿಸಿದ್ದಾರೆ ಎಂದು ಪ್ರಶಂಸಿಸಿದರು. ಮಾಧ್ಯಮ ವಲಯದಲ್ಲಿ ಹೊಸ ಪ್ರಯೋಗಶೀಲತೆ ಮೆರೆಯಲು ವಿಸ್ತೃತ ಓದು, ಅಗಾಧ ಜ್ಞಾನ ಬೇಕು. ತಂತ್ರಜ್ಞಾನವನ್ನು ಹೆಚ್ಚಾಗಿ ಅವಲಂಬಿಸಿದರೆ ಜ್ಞಾನ ಅಭಿವೃದ್ಧಿಯಾಗುವುದಿಲ್ಲ. ಇಲ್ಲದಿದ್ದಲ್ಲಿ ವರದಿಗಾರರಿಗೆ ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸುವುದು ಕಠಿಣವಾಗುತ್ತದೆ ಎಂದರು.

‘ಕದಂಬ’ ಪ್ರಾಯೋಗಿಕ ಮಾಸ ಪತ್ರಿಕೆಯ ವಿದ್ಯಾರ್ಥಿ ಸಂಪಾದಕರಾಗಿ ತಮಗೆದುರಾದ ಸವಾಲುಗಳ ಬಗ್ಗೆ ಮಂಜುನಾಥ್ ಎ.ಡಿ. ಪ್ರಸ್ತಾಪಿಸಿದರು. ಮಾಸಿಕದ ಇನ್ನೋರ್ವ ವಿದ್ಯಾರ್ಥಿ ಸಂಪಾದಕ ಗ್ಲೆನ್ ಗುಂಪಲಾಜೆ ಮಾಸಿಕ ಹೊರತರುವ ಪ್ರಯೋಗಶೀಲತೆಯ ಹಿಂದಿನ ವಿವಿಧ ಹಂತಗಳನ್ನು ನೆನಪಿಸಿಕೊಂಡರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ ಹೆಗ್ಡೆ ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿವರ್ಷ ನಿಯತಕಾಲಿಕಗಳನ್ನು ಹೊರತರುವ ಕ್ರಿಯಾಶೀಲತೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಕ್ರಿಯಾಶೀಲತೆಯ ಪರಂಪರೆಗೆ ‘ಕದಂಬ’ ಮಾಸಿಕವು ಮಹತ್ವದ ಸೇರ್ಪಡೆ ಎಂದು ಹೇಳಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಶ್ರೇಯಾ ಸ್ವಾಗತಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಮಾನಸಾ ಅಗ್ನಿಹೋತ್ರಿ ನಿರೂಪಿಸಿದರು. ಗ್ಲೆನ್ ಗುಂಪಲಾಜೆ ವಂದಿಸಿದರು. ಲಕ್ಷ್ಮೀ ಮಚ್ಚಿನ ಅವರನ್ನು ಸಮ್ಮಾನಿಸಲಾಯಿತು.