ಬರಪೀಡಿತ ತಾಲೂಕುಗಳ ಜಾನುವಾರುಗಳಿಗೆ ಮಿನಿ ಕಿಟ್‌

| Published : May 06 2024, 12:37 AM IST

ಸಾರಾಂಶ

ಈ ಮೇವಿನ ಮಿನಿ ಕಿಟ್‌ 6 ಕೆಜಿ ಹಲ್ಲು ಜೋಳ ಬೀಜ ಹಾಗೂ 5 ಕೆಜಿ ಸೋರ್ಗಮ್‌ ಬೀಜಗಳನ್ನು ಒಳಗೊಂಡಿದೆ. ಇವುಗಳನ್ನು ಬಿತ್ತನೆ ಮಾಡಿದ 60ರಿಂದ 75 ದಿನದೊಳಗೆ ಮೇವು ಕಟಾವಿಗೆ ಬರುತ್ತದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಸಿಲ ಝಳದಿಂದ ಕೆಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ನೀರಿಗೆ ಸಮಸ್ಯೆ ಇದ್ದರೂ, ಸದ್ಯದ ಮಟ್ಟಿಗೆ ಜಾನುವಾರುಗಳ ಮೇವಿಗೆ ಕೊರತೆ ಇಲ್ಲ. ಆದರೆ ಸಾಧಾರಣ ಬರಪೀಡಿತ ತಾಲೂಕಾಗಿ ಘೋಷಣೆಯಾಗಿರುವ ಮೂಡುಬಿದಿರೆ ಮತ್ತು ಮಂಗಳೂರು ತಾಲೂಕುಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೇವಿಗೆ ಕೊರತೆ ಆಗದಂತೆ ಮೇವಿನ ಬೀಜಗಳುಳ್ಳ ಮಿನಿ ಕಿಟ್‌ ವಿತರಿಸಲಾಗುತ್ತಿದೆ.

ರಾಜ್ಯಾದ್ಯಂತ ಬರಪೀಡಿತ ತಾಲೂಕುಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ ಬಳಿಕ ಜಾನುವಾರುಗಳಿಗೆ ಸಂಬಂಧಿಸಿದಂತೆ ಪರಿಹಾರ ಕಾರ್ಯವಾಗಿ ಮೇವಿನ ಬೀಜಗಳುಳ್ಳ ಮಿನಿ ಕಿಟ್‌ ವಿತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೂ ಈ ಮಿನಿ ಕಿಟ್‌ಗಳು ಬಂದಿದ್ದು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಇವುಗಳನ್ನು ರೈತರಿಗೆ ವಿತರಿಸುತ್ತಿದೆ.ಕಿಟ್‌ನಲ್ಲಿ ಏನಿದೆ?:

ಈ ಮೇವಿನ ಮಿನಿ ಕಿಟ್‌ 6 ಕೆಜಿ ಹಲ್ಲು ಜೋಳ ಬೀಜ ಹಾಗೂ 5 ಕೆಜಿ ಸೋರ್ಗಮ್‌ ಬೀಜಗಳನ್ನು ಒಳಗೊಂಡಿದೆ. ಇವುಗಳನ್ನು ಬಿತ್ತನೆ ಮಾಡಿದ 60ರಿಂದ 75 ದಿನದೊಳಗೆ ಮೇವು ಕಟಾವಿಗೆ ಬರುತ್ತದೆ. ನಂತರ ತಿಂಗಳಿಗೊಂದಾವರ್ತಿಯಂತೆ ಮೂರ್ನಾಲ್ಕು ಬಾರಿ ಮೇವು ಕಟಾವು ಮಾಡಬಹುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ಶೆಟ್ಟಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ದ.ಕ. ಜಿಲ್ಲೆಯ 2 ತಾಲೂಕುಗಳಿಗೆ ಕಳೆದ ತಿಂಗಳಲ್ಲೇ 5592 ಇಂಥ ಕಿಟ್‌ಗಳು ಬಂದಿದ್ದವು. ಈ ನಡುವೆ ಚುನಾವಣೆ ಬಂದಿದ್ದರಿಂದ ವಿತರಣೆಗೆ ಸಮಸ್ಯೆಯಾಗಿದ್ದು, ಇದುವರೆಗೆ 1183 ಕಿಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ಅತಿ ಶೀಘ್ರದಲ್ಲಿ ಎಲ್ಲ ಕಿಟ್‌ಗಳನ್ನು ರೈತರಿಗೆ ವಿತರಿಸಲಾಗುವುದು ಎಂದಿದ್ದಾರೆ.

ಜಾನುವಾರು ಹೊಂದಿರುವ ರೈತರು ಹಾಲು ಹಾಕಲು ಸೊಸೈಟಿಗೆ ಬರುವಾಗ ಅವರಿಗೆ ಮಾಹಿತಿ ನೀಡಿ, ಆಸಕ್ತರಿಗೆ ಆಧಾರ್‌ ಕಾರ್ಡ್‌ ಹಾಗೂ ಜಮೀನು ಹೊಂದಿರುವುದಕ್ಕೆ ದಾಖಲೆಯಾಗಿ ಆರ್‌ಟಿಸಿ ಪಡೆದು ಕಿಟ್‌ ವಿತರಿಸಲಾಗುತ್ತಿದೆ. ಜಾಸ್ತಿ ಜಮೀನು ಹೊಂದಿರುವವರಿಗೆ ಬೇಡಿಕೆಯಂತೆ ಒಂದೆರಡು ಹೆಚ್ಚುವರಿ ಕಿಟ್‌ಗಳನ್ನೂ ನೀಡಲಾಗುತ್ತಿದೆ.

2019ರ ಜಾನುವಾರು ಸಮೀಕ್ಷೆ ಪ್ರಕಾರ ದ.ಕ. ಜಿಲ್ಲೆಯಲ್ಲಿ 2,50,569 ಹಸುಗಳು, 289 ಕುರಿಗಳು ಮತ್ತು 32,215 ಮೇಕೆಗಳು ಸೇರಿದಂತೆ ಒಟ್ಟು 2,84,905 ಜಾನುವಾರುಗಳಿವೆ. ಒಟ್ಟು 65 ಸಾವಿರ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. 33 ಸಾವಿರ ರೈತರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸರಾಸರಿ 2,32,194 ಲೀಟರ್ ಹಾಲು ಸಂಗ್ರಹಿಸಲಾಗುತ್ತದೆ....................ಅಂತಿಮ ಹಂತದಲ್ಲಿ ಕಾಲುಬಾಯಿ ಲಸಿಕೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏ.1ರಿಂದ ಜಾನುವಾರುಗಳಿಗೆ ಕಾಲು ಬಾಯಿ ರೋಗದ ವಿರುದ್ಧ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ಇದೀಗ ಅಂತಿಮ ಹಂತದಲ್ಲಿದೆ. ಕಳೆದ ಬಾರಿ 2.21 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಗಿದ್ದು, ಈ ವರ್ಷ ಇದುವರೆಗೆ 2.10 ಲಕ್ಷ ಜಾನುವಾರುಗಳಿಗೆ ಹಾಕಲಾಗಿದೆ. ಉಳಿದ ಜಾನುವಾರುಗಳಿಗೆ ಮೇ 10ರೊಳಗೆ ಲಸಿಕೆ ಹಾಕಲಾಗುವುದು ಎಂದು ಡಾ.ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.