ಕಾಂಗ್ರೆಸ್‌ಗೆ ಬೆಂಬಲಿಸಲು ರೆಡ್ಡಿ ಸಮಾಜಕ್ಕೆ ಸಚಿವ ಖರ್ಗೆ ಮನವಿ

| Published : May 06 2024, 12:30 AM IST

ಕಾಂಗ್ರೆಸ್‌ಗೆ ಬೆಂಬಲಿಸಲು ರೆಡ್ಡಿ ಸಮಾಜಕ್ಕೆ ಸಚಿವ ಖರ್ಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತ ರೆಡ್ಡಿ‌ ಸಮುದಾಯ ನಾಯಕರು ರಾಜಕೀಯವಾಗಿ ಪ್ರಭಾವಿಗಳಾಗಿದ್ದು, ಅಭಿವೃದ್ಧಿಯ ಪರವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಖರ್ಗೆ ಸಾಹೇಬರು ಸೋತಿದ್ದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದಾಗಿದ್ದು, ಪ್ರಭಾವಿ ಸಮುದಾಯದವರಾದ ನೀವೆಲ್ಲ. ಕಾಂಗ್ರೆಸ್‌ ಬೆಂಬಲಕ್ಕೆ ನಿಲ್ಲಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ‌ ಮನವಿ ಮಾಡಿದರು.

ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಲಿಂಗಾಯತ ರೆಡ್ಡಿ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಲಿಂಗಾಯತ ರೆಡ್ಡಿ‌ ಸಮುದಾಯ ನಾಯಕರು ರಾಜಕೀಯವಾಗಿ ಪ್ರಭಾವಿಗಳಾಗಿದ್ದು, ಅಭಿವೃದ್ಧಿಯ ಪರವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಖರ್ಗೆ ಸಾಹೇಬರು ಸೋತಿದ್ದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಾಗಿ ನೀವೆಲ್ಲ ಈ ಸಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ವಿನಂತಿಸಿದರು.

ತಾವು ಅಪ್ಪಟ ಬಸವ ಪ್ರೇಮಿಯಾಗಿದ್ದು, ಅವರ ತತ್ವಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವುದಾಗಿ ಹೇಳಿದ ಖರ್ಗೆ, ಹಿಂದಿನ ಬಿಜೆಪಿ ಸರ್ಕಾರ ಪಠ್ಯಗಳಲ್ಲಿ ಬಸವಣ್ಣನವರ ಕುರಿತ ಪಾಠಗಳನ್ನು ಕೈಬಿಟ್ಟಾಗ ಪ್ರತಿಭಟನೆ ಮಾಡಿರುವುದಾಗಿ ನೆನಪಿಸಿಕೊಂಡರು. ಸಚಿವ ಶರಣಬಸಪ್ಪ ದರ್ಶನಾಪುರ ಅವರೊಂದಿಗೆ ಸಿಎಂ ಅವರೊಂದಿಗೆ ಚರ್ಚಿಸಿ‌ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ‌ನಾಯಕರೆಂದು ಘೋಷಿಸಲು ಶ್ರಮಿಸಿದ್ದಾಗಿ ಹೇಳಿದರು.

ಕಲಬುರಗಿ ಹೊರವಲಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣ ಮಾಡಲು ಸಿದ್ಧರಿರುವುದಾಗಿ ಹೇಳಿದ ಸಚಿವರು, ಈ ವಿಚಾರಕ್ಕೆ ದರ್ಶನಾಪುರ ಸಾಹೇಬರು ಮಾರ್ಗದರ್ಶನ ನೀಡಬೇಕು ಎಂದರು.

ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ರಾಮಲಿಂಗಾರೆಡ್ಡಿ ಮಾತನಾಡಿ, ಸಮುದಾಯದ ಬಂಧುಗಳು ಧರ್ಮಗಳ ನಡುವೆ ಭಿನ್ನತೆ ಮೂಡಿಸುವ ಬಿಜೆಪಿಯನ್ನು ತಿರಸ್ಕರಿಸಿ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಬಸವಣ್ಣನವರ ಹಾಗೂ ಹೇಮರೆಡ್ಡಿ ಮಲ್ಲಮ್ಮನವರ ಸಮಾನತೆ ತತ್ವವನ್ನು ಎತ್ತಿ‌ಹಿಡಿಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ರಾಧಾಕೃಷ್ಣ ಅವರು ಮತಯಾಚಿಸಿದರು. ಅಭ್ಯರ್ಥಿಯನ್ನು ಮುಖಂಡ ಭೀಮರೆಡ್ಡಿ ಪಾಟೀಲ್ ಸನ್ಮಾನಿಸುವ ಮೂಲಕ ಸ್ವಾಗತಿಸಿದರು. ಮಾಜಿ ಉಪ ಮಹಾಪೌರ ಮಹೇಶ ಹೊಸೂರ್ ಕರ್ ನಿರೂಪಿಸಿದರು. ಶಾಂತರೆಡ್ಡಿ ಪೇಟ‌ ಶಿರೂರು ವಂದನಾರ್ಪಣೆ ಮಾಡಿದರು.

ವೇದಿಕೆಯ ಮೇಲೆ ಭಾಗನಗೌಡ ಸಂಕನೂರು, ಡಾ ಕಾಮರೆಡ್ಡಿ, ವೀರನಗೌಡ ಪರಸರೆಡ್ಡಿ ಸೇರಿದಂತೆ ಹಲವರಿದ್ದರು.