ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಬೇಕು

| Published : May 05 2024, 02:08 AM IST

ಸಾರಾಂಶ

ಯಾವುದೇ ವೃತ್ತಿ ಇರಲಿ ಬಡವರ ಬಗ್ಗೆ ಕಾಳಜಿ ಇರಲಿ, ಭ್ರಷ್ಟಾಚಾರ ಬೇಡ, ಮಾನವೀಯತೆ ಇರಲಿ, ಬೇಕಾದರೆ ಶ್ರೀಮಂತರಿಂದ ಹೆಚ್ಚಿಗೆ ಹಣ ಪಡೆದು ಬಡವರಿಗೆ ಸಹಾಯ ಮಾಡಿ

ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಹಳ ಕಡಿಮೆ ಖರ್ಚು ಮಾಡುತ್ತಿವೆ, ಮಹತ್ವದ ಕ್ಷೇತ್ರ ಇದಾಗಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಸುದರ್ಶನ್ ತಿಳಿಸಿದರು. ನಗರ ಹೊರವಲಯದ ಟಮಕದಲ್ಲಿ ಶನಿವಾರ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ೧೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದರು. ಕೇವಲ ಶೇ. 3.4 ಅನುದಾನ

ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಆರೋಗ್ಯಕ್ಕೆ ಕ್ಷೇತ್ರಕ್ಕೆ ಶೇ.೫ರಷ್ಟು ಹಣ ಮೀಸಲಿಡಲಾಗುತಿತ್ತು, ಈ ಬಾರಿ ಕೇವಲ ಶೇ.೩.೪ರಷ್ಟು ಅನುದಾನ ಇಟ್ಟಿದ್ದಾರೆ. ಕೇರಳ ರಾಜ್ಯದಲ್ಲಿ ಶೇ.೭ರಷ್ಟು ಅನುದಾನ ಮೀಸಲಿಡುತ್ತಾರೆ. ಯಾವುದೇ ವೃತ್ತಿ ಇರಲಿ ಬಡವರ ಬಗ್ಗೆ ಕಾಳಜಿ ಇರಲಿ, ಭ್ರಷ್ಟಾಚಾರ ಬೇಡ, ಮಾನವೀಯತೆ ಇರಲಿ, ಬೇಕಾದರೆ ಶ್ರೀಮಂತರಿಂದ ಹೆಚ್ಚಿಗೆ ಹಣ ಪಡೆದು ಬಡವರಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿದೆ, ವೈದ್ಯಕೀಯ ಕೋರ್ಸ್ ಓದಿದವರು ಯುಪಿಎಸ್‌ಸಿ ಪರೀಕ್ಷೆ ಬರೆದು ಅಧಿಕಾರಿಗಳಾಗುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿ ಆರೋಗ್ಯ ಇಲಾಖೆಯ ಅಭಿವೃದ್ಧಿ ಮಾಡಲು ಸಾಧ್ಯ. ಆದರೆ, ಕೆಲವರು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳಾಗುತ್ತಿದ್ದಾರೆ. ಅವರ ಉದ್ದೇಶವೇ ಬೇರೆ. ವೈದ್ಯಕೀಯ ಓದಿಗೂ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಈ ರೀತಿ ಆಗಬಾರದು ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ವೃತ್ತಿ ನನಗೆ ಲೈಫ್ ಮಿಷನ್ ಇದ್ದಂತೆ. ತಂದೆ ಹೃದಯಾಘಾತದಿಂದ ಮೃತರಾದರು. ಅಂದು ನಾನು ಅಸಹಾಯಕನಾಗಿದ್ದೆ. ಆದರೆ, ಅಳಲಿಲ್ಲ. ಬದಲಾಗಿ ವೈದ್ಯನಾಗಬೇಕೆಂದು ಅಂದೇ ನಿರ್ಧರಿಸಿದೆ. ಆ ಆಸೆ ಈಡೇರಿತು. ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು. ೩೨೧ ವಿದ್ಯಾರ್ಥಿಗೆ ಪದವಿ; ೧೪ ಮಂದಿಗೆ ಚಿನ್ನಶ್ರೀ ದೇವರಾಜ ಅರಸು ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ಜಿ.ಎಚ್.ನಾಗರಾಜ್ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದರು.

ಸಂಸ್ಥೆಯ ಒಟ್ಟು ೩೨೧ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿಪೂರ್ವ (ಎಂಬಿಬಿಎಸ್) ಹಾಗೂ ಅಲೈಡ್ ಹೆಲ್ತ್ ಅಂಡ್ ಬೆಸಿಕ್ ಸೈನ್ಸಸ್ (ಬಿಎಸ್ಸಿ ಹಾಗೂ ಎಂಎಸ್ಸಿ) ಕೋರ್ಸ್‌ಗಳಲ್ಲಿ ಸಂಸ್ಥಾಪಕ ಅಧ್ಯಕ್ಷರ ಹೆಸರಲ್ಲಿ ೧೪ ಚಿನ್ನದ ಪದಕಗಳನ್ನು ನೀಡಲಾಯಿತು. ಡಾ.ರಾಹಿಲ್ ಮಹಮ್ಮದ್ ರಹಮತುಲ್ಲಾ ಮೂರು ಚಿನ್ನದ ಪದಕಗಳಿಗೆ ಭಾಜನರಾದರು. ಡಾ.ಮೆನಾಲಿ ಉತ್ಪಲ ದಿಸಾನಾಯಕ್ ಹಾಗೂ ಸನಾ ಚಂದರ್ ತಲಾ ಎರಡು ಚಿನ್ನದ ಪದಕ ಪಡೆದರು.

ಸಂಸ್ಥೆಯ ಕುಲಪತಿ ಡಾ.ಬಿ.ವೆಂಗಮ್ಮ , ಕುಲಸಚಿವ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಸಿ.ಮುನಿನಾರಾಯಣ, ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಟ್ರಸ್ಟಿಗಳಾದ ಡಾ.ಎಂ.ವಿಜಯಕುಮಾರ್, ರಾಜೇಶ್ ಜಗದಾಳೆ, ಸಲಹೆಗಾರ ಎಸ್.ಚಂದ್ರಶೇಖರ್ ಶೆಟ್ಟಿ, ಡೀನ್‌ಗಳಾದ ಡಾ.ಪ್ರಭಾಕರ್, ಡಾ.ದಯಾನಂದ್, ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ, ವಿಜಯಲಕ್ಷ್ಮಿ ಭಟ್ ಇದ್ದರು.