ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಕ್ರಮ: ಕೆ. ನಟರಾಜ

| Published : Apr 26 2024, 12:47 AM IST

ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಕ್ರಮ: ಕೆ. ನಟರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ರೋಗಗಳು ಸೊಳ್ಳೆಯಿಂದಲೇ ಬರುತ್ತಿದ್ದು, ನೀರು ಶೇಖರಣೆಯೇ ಸೊಳ್ಳೆ ಉತ್ಪತ್ತಿಗೆ ಮುಖ್ಯವಾದ ಕಾರಣವಾಗಿದೆ.

ಕಾರವಾರ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಜಾಥಾ, ಮನೆ ಮನೆ ಭೇಟಿ ನೀಡಿ ಅರಿವು ಮೂಡಿಸುವುದು ಮಾಡಲಾಗುತ್ತಿದೆ ಎಂದು ಆರ್‌ಸಿಎಚ್‌ಒ ಕೆ. ನಟರಾಜ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುತೇಕ ರೋಗಗಳು ಸೊಳ್ಳೆಯಿಂದಲೇ ಬರುತ್ತಿದ್ದು, ನೀರು ಶೇಖರಣೆಯೇ ಸೊಳ್ಳೆ ಉತ್ಪತ್ತಿಗೆ ಮುಖ್ಯವಾದ ಕಾರಣವಾಗಿದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕ್ಯಾ. ರಮೇಶ ರಾವ್ ಮಾತನಾಡಿ, ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ ಕಡಿಮೆಯಾಗುತ್ತಿದ್ದು, ೨೦೧೮ರಿಂದ ಸ್ಥಳೀಯವಾಗಿ ಯಾರಲ್ಲೂ ಕಂಡುಬರುತ್ತಿಲ್ಲ. ಆದರೆ ವಿವಿಧ ಕೆಲಸ ಕಾರ್ಯಗಳಿಗೆ ಕಾರ್ಮಿಕರಾಗಿ ಹೊರಗಿನಿಂದ ಬಂದವರಲ್ಲಿ ಕಾಣಿಸಿಕೊಳ್ಳುತ್ತಿದೆ. ೨೦೨೩ರಲ್ಲಿ ಜಿಲ್ಲೆಯಲ್ಲಿ ೧೬ ಪ್ರಕರಣ ದೃಢವಾಗಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ, ಗೋವಾ ಒಳಗೊಂಡು ಬೇರೆ ಬೇರೆ ಕಡೆಯಿಂದ ಬಂದವರಲ್ಲಿ ದೃಢಪಟ್ಟಿದೆ. ಮಲೇರಿಯಾವನ್ನು ೨೦೨೫ಕ್ಕೆ ರಾಜ್ಯದಲ್ಲಿ ನಿರ್ಮೂಲನೆ ಮಾಡಬೇಕು ಎಂದು ಪಣತೊಡಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬೇಸಿಗೆಯಾದ ಕಾರಣ ನೀರಿನ ಅಭಾವ ಹೆಚ್ಚಾಗುತ್ತಿದೆ. ಬ್ಯಾರಲ್ ಮತ್ತಿತರ ತೊಟ್ಟಿಗಳಲ್ಲಿ ನೀರನ್ನು ತುಂಬಿಡುವುದು ಸಹಜವಾಗಿದೆ. ಈ ರೀತಿ ತುಂಬಿಟ್ಟರೆ ಸೊಳ್ಳೆ ಹೋಗಲಾಗದಂತೆ ಮುಚ್ಚಿಡಬೇಕು. ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆಗೆ ಮೊಟ್ಟೆ ಇಡಲು ಅವಕಾಶ ಆಗಬಾರದು. ಜತೆಗೆ ೪- ೫ ದಿನಕ್ಕೊಮ್ಮೆ ಬ್ಯಾರಲ್ ಖಾಲಿ ಮಾಡಿ ಸ್ವಚ್ಛವಾಗಿ ತೊಳೆದು ಒಣಗಿಸಿ ಮತ್ತೆ ನೀರು ತುಂಬಬಹುದು. ಟೈರ್, ಬಕೆಟ್‌ನಂತಹ ಘನತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಅದರಲ್ಲೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತದೆ ಎಂದು ಸಲಹೆ ನೀಡಿದರು.