ಕುಡಿಯುವ ನೀರು ಬೋರ್‌ವೆಲ್‌ ಕೊರೆಯಲು ಕೃಷಿಕರ ಆಕ್ಷೇಪ

| Published : May 07 2024, 01:01 AM IST

ಸಾರಾಂಶ

ಆರ್ಯಾಪು ಗ್ರಾ.ಪಂ.ನ ಕೊಲ್ಯ ಎಂಬ ಪ್ರದೇಶ ನಿವಾಸಿಗಳಿಗೆ ಕಳೆದ ೧೫ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಪಂಚಾಯಿತಿಗೆ ದೂರು ಬಂದ ಹಿನ್ನಲೆಯಲ್ಲಿ ಪಂಚಾಯಿತಿಯಿಂದ ಹೊಸ ಬೋರ್‌ವೆಲ್ ಕೊರೆಸಲು ಹೊರಟ ಸಂದರ್ಭ ಸ್ಥಳೀಯ ಕೃಷಿಕರು ಆಕ್ಷೇಪಿಸಿದರು. ತಹಸೀಲ್ದಾರ್ ಮಧ್ಯಪ್ರವೇಶ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲೆಂದು ಜನವಸತಿ ಪ್ರದೇಶದ ಬಳಿಯಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲು ಗ್ರಾಮ ಪಂಚಾಯಿತಿ ಮುಂದಾದ ಸಂದರ್ಭ ಸ್ಥಳೀಯ ಕೃಷಿಕರು ಆಕ್ಷೇಪ ವ್ಯಕ್ತ ಪಡಿಸಿ ಕೆಲಸ ಸ್ಥಗಿತಗೊಳಿಸಿದ ಘಟನೆ ಸೋಮವಾರ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಂಬಳದಡ್ಡ ಎಂಬಲ್ಲಿ ನಡೆದಿದೆ.

ಆರ್ಯಾಪು ಗ್ರಾ.ಪಂ.ನ ಕೊಲ್ಯ ಎಂಬ ಪ್ರದೇಶವು ಜನವಸತಿ ಹೊಂದಿರುವ ಕಾಲೊನಿಯಾಗಿದ್ದು, ಇಲ್ಲಿನ ನಿವಾಸಿಗಳಿಗೆ ಕಳೆದ ೧೫ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಪಂಚಾಯಿತಿಗೆ ದೂರು ಬಂದ ಹಿನ್ನಲೆಯಲ್ಲಿ ಪಂಚಾಯಿತಿಯಿಂದ ಹೊಸ ಬೋರ್‌ವೆಲ್ ಕೊರೆಸಿ ಕುಡಿಯುವ ನೀರಿನ ಬವಣೆ ಪರಿಹರಿಸಲು ತೀರ್ಮಾನಿಸಲಾಗಿತ್ತು. ಕೊಲ್ಯ ಕಾಲೋನಿಯಲ್ಲಿ ಸುಮಾರು ೮೦ರಷ್ಟು ಮನೆಗಳಿದ್ದು, ಈ ಮನೆಗಳಿಗೆ ೪ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಪೈಕಿ ೩ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿರುವ ಕಾರಣ ಕಳೆದ ೧೫ ದಿನಗಳಿಂದ ಕೊಲ್ಯದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಕಳೆದ ಎರಡು ದಿನಗಳಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡು ಪಂಚಾಯಿತಿಗೆ ದೂರು ಬಂದಿತ್ತು.

ಈ ಹಿನ್ನಲೆಯಲ್ಲಿ ಬೋರ್‌ವೆಲ್ ಕೊರೆಯಲು ಕೊಲ್ಯದ ಪಕ್ಕದಲ್ಲಿರುವ ಕಂಬಳದಡ್ಡ ಎಂಬಲ್ಲಿ ಜಾಗ ಗುರುತಿಸಲಾಗಿತ್ತು. ಸೋಮವಾರ ಬೆಳಗ್ಗೆ ಬೋರ್‌ವೆಲ್ ಕೊರೆಯುವ ಕಾರ್ಯ ಆರಂಭಿಸಲಾಗಿತ್ತು. ಬೋರ್‌ವೆಲ್ ಕೊರೆಯುವ ಯಂತ್ರದ ಲಾರಿ ಬಂದು ಬೋರ್‌ವೆಲ್ ಕೊರೆಯುವ ಕೆಲಸ ಆರಂಭಿಸುತ್ತಿದ್ದಂತೆಯೇ ಆ ಭಾಗದ ಕೃಷಿಕರು ಆಗಮಿಸಿ ಬೋರ್‌ವೆಲ್ ಕೊರೆಯುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಮಾತ್ರವಲ್ಲದೆ ಕಾಮಗಾರಿ ಮುಂದುವರಿಯಲು ಬಿಡದೆ ತಡೆದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆರ್ಯಾಪು ಗ್ರಾಪಂ ಪಿಡಿಒ ನಾಗೇಶ್ ಎಂ ಅವರು ಆಕ್ಷೇಪ ವ್ಯಕ್ತ ಪಡಿಸಿದವರ ಮನವೊಲಿಸುವ ಪ್ರಯತ್ನ ಮಾಡಿದರೂ ಅಲ್ಲಿನ ಮಂದಿ ಜಗ್ಗದೇ ಇರುವುದರಿಂದ ಈ ವಿಚಾರವನ್ನು ಅವರು ತಹಸಿಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರು.

ಬಳಿಕ ಪುತ್ತೂರು ತಹಸಿಲ್ದಾರ್ ಕುಂಞ ಅಹ್ಮದ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನಮ ರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ತಡೆಯದಂತೆ ತಿಳಿಸಿದ ವೇಳೆಯೂ ಅಲ್ಲಿನ ಕೃಷಿಕರು ಬೋರ್‌ವೆಲ್ ಕೊರೆಯುವುದಕ್ಕೆ ತಮ್ಮ ಆಕ್ಷೇಪ ಮುಂದುವರಿಸಿದರು.

ಸಾರ್ವಜನಿಕರಿಗೆ ಕುಡಿಯುವ ನೀರು ವ್ಯವಸ್ಥೆಗೊಳಿಸಲು ಬೋರ್‌ವೆಲ್ ಕೊರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ತಡೆಯಲು ಮುಂದಾದ ಹಿನ್ನಲೆಯಲ್ಲಿ ತಹಸೀಲ್ದಾರರು ಬೋರ್‌ವೆಲ್ ಕೊರೆಯಲು ಆದೇಶ ಮಾಡಿದ್ದಲ್ಲದೆ, ಅಗತ್ಯ ಬಿದ್ದರೆ ಸೆಕ್ಷನ್ ೧೪೪ ಜಾರಿಗೊಳಿಸಿ, ತೊಂದರೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಸಂಪ್ಯ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ರಂಗಶ್ಯಾಮಯ್ಯ ಅವರಿಗೆ ಸೂಚಿಸಿದರು.

ತಹಸೀಲ್ದಾರ್‌ ಆದೇಶ ಮತ್ತು ಕಾನೂನು ಕ್ರಮದ ಎಚ್ಚರಿಕೆಯ ಬಳಿಕ ಪಟ್ಟು ಸಡಿಲಿಸಿದ ಅಲ್ಲಿನ ಕೃಷಿಕರು, ಇಲ್ಲಿ ಪಂಚಾಯಿತಿ ಬೋರ್‌ವೆಲ್ ಕೊರೆದರೆ ನಮ್ಮ ಕೃಷಿಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಾಗಾಗಿ ಭವಿಷ್ಯದಲ್ಲಿ ಈ ಪರಿಸರದ ನಾವು ಬೋರ್‌ವೆಲ್ ಕೊರೆಯುವ ವೇಳೆ ಪಂಚಾಯಿತಿ ವತಿಯಿಂದ ತೊಂದರೆ ನೀಡಬಾರದು ಎಂದು ವಿನಂತಿಸಿದರು. ಇದಕ್ಕೆ ಗ್ರಾಮ ಪಂಚಾಯತ್ ಪಿಡಿಒ ಸಮ್ಮತಿ ಸೂಚಿಸಿದರು. ಬಳಿಕ ಅಧಿಕಾರಿಗಳ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಬೋರ್‌ವೆಲ್ ಕೊರೆಸುವ ಕೆಲಸ ಮುಂದುವರಿಸಲಾಯಿತು. .............ಆರ್ಯಾಪು ಗ್ರಾಮದ ಕೊಲ್ಯ ವ್ಯಾಪ್ತಿಯಲ್ಲಿ ಕಳೆದ ೨ ದಿನಗಳಿಂದ ನೀರಿನ ಸಮಸ್ಯೆ ತೀವ್ರಗೊಂಡಿತ್ತು. ಈ ಹಿನ್ನಲೆಯಲ್ಲಿ ಪಾಯಿಂಟ್ ಗುರುತಿಸಿ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಕೆಲವು ಖಾಸಗಿ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಯಿತು. ಅವರ ಮನವೊಲಿಸುವ ಕೆಲಸ ಮಾಡಿದ್ದೇವೆ. ಅಡಚಣೆ ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಬಳಿಕ ಎಲ್ಲರೂ ಸಹಕಾರ ನೀಡಿದ್ದಾರೆ.

-ಕುಂಞ ಅಹ್ಮದ್, ತಹಸೀಲ್ದಾರ್‌.