ಮತಗಟ್ಟೆ ಕೇಂದ್ರಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿ

| Published : May 07 2024, 01:04 AM IST

ಸಾರಾಂಶ

ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದಿಂದ ಮತಯಂತ್ರಗಳನ್ನು ಹೊತ್ತು ವಿವಿಧ ಮತಗಟ್ಟೆಗಳಿಗೆ ಪಿಆರ್‌ಒ, ಎಪಿಆರ್‌ಒ ಮತ್ತಿತರ ಸಿಬ್ಬಂದಿ ತೆರಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಇಂದು ನಡೆಯುವ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುವ ಹಿನ್ನೆಲೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಮತ್ತು ತಹಸೀಲ್ದಾರ್‌, ಪಿಆರ್‌ಒ, ಎಪಿಆರ್‌ಒ ಮತ್ತಿತರ ಸಿಬ್ಬಂದಿಗೆ ಮತಯಂತ್ರ, ಅಗತ್ಯ ಸಾಮಗ್ರಿಗಳನ್ನು ನೀಡಿ ಮತಗಟ್ಟೆ ಕೇಂದ್ರಗಳಿಗೆ ಸೋಮವಾರ ಕಳುಹಿಸಿಕೊಟ್ಟರು.

1,350 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. 30 ಪ್ಯಾರಾ ಮಿಲಿಟರಿ ಸಿಬ್ಬಂದಿ ಮತ್ತು 269 ಜನ ಗ್ರೂಪ್ ‘ಡಿ’ ನೌಕರರು ಕೆಲಸ ಮಾಡಲಿದ್ದು, ವಿವಿಧ ಇಲಾಖೆಯಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಒಟ್ಟು 2500 ಸಿಬ್ಬಂದಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಮಾವಣೆಗೊಂಡು ನಂತರ ಮತದಾನಕ್ಕೆ ಬೇಕಾಗುವ ಅಗತ್ಯ ಸಾಮಗ್ರಿಗಳೊಂದಿಗೆ ಕೇಂದ್ರಗಳತ್ತ ಬಸ್, ಸ್ಕೂಲ್ ಬಸ್, ಕ್ರೂಸರ್ ವಾಹನಗಳಲ್ಲಿ ತೆರಳಿದರು.

ಕ್ಷೇತ್ರದಲ್ಲಿ ಒಟ್ಟು269 ಮತಗಳಿದ್ದು, 2,47,218 ಮತರಿದ್ದಾರೆ. ಅದರಲ್ಲಿ 1,20,300 ಪುರುಷರು, 1,26,958 ಮಹಿಳಾ ಮತದಾರರು, 24 ಜನ ತೃತೀಯ ಲಿಂಗದ ಮತದಾರರು ಇದ್ದಾರೆ.

65 ಸೂಕ್ಷ್ಮ ಮತಗಟ್ಟೆಗಳಲ್ಲಿ ತಿಮ್ಮಾಪೂರ, ಗಿಣಿವಾರ, ಎಲೆಕೂಡ್ಲಿಗಿ, ಆರ್.ಎಚ್.ನಂ.2 ಮತ್ತು ಕೆಇಬಿ ಮತಗಟ್ಟೆ ಸೇರಿ ಒಟ್ಟು 5 ಮತಗಟ್ಟೆಗಳನ್ನು ಅತಿ ಸೂಕ್ಷ್ಮವೆಂದು ಗುರುತಿಸಲಾಗಿದ್ದು, ಇಲ್ಲಿ 60 ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. 60 ಮತಗಟ್ಟೆಗಳಲ್ಲಿ ಹೆಡ್ ಕಾನ್ಸ್‌ಟೇಬಲ್ ಒಬ್ಬ ಎಎಸ್ಪಿ ಮತ್ತು ಓರ್ವ ಕಾನ್ಸ್‌ಟೇಬಲ್ ಅವರನ್ನು ನಿಯೋಜಿಸಲಾಗಿದ್ದು, ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬ ಕಾನ್ಸ್‌ಟೇಬಲ್ ಮತ್ತು ಒಬ್ಬ ಗಾರ್ಡ್‌ನ್ನು ನಿಯೋಜಿಸಿದ್ದು, ಒಟ್ಟು 520 ಪೊಲೀಸರನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುವುದು. 65 ಸೂಕ್ಷ್ಮ ಮತಗಟ್ಟೆಗಳಿಗೆ ಸಿಸಿಟಿವಿ ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಹೇಶ ಪೋತೆದಾರ್, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ತಿಳಿಸಿದರು.