ಪ್ರಜ್ವಲ್‌ ರೇವಣ್ಣ ಪ್ರಕರಣ ಗಂಭೀರವಾಗಿ ತನಿಖೆಯಾಗಲಿ: ಅಣ್ಣಾಮಲೈ

| Published : May 05 2024, 02:06 AM IST

ಪ್ರಜ್ವಲ್‌ ರೇವಣ್ಣ ಪ್ರಕರಣ ಗಂಭೀರವಾಗಿ ತನಿಖೆಯಾಗಲಿ: ಅಣ್ಣಾಮಲೈ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಗಂಜ್ ವೃತ್ತದಿಂದ ಗಾಂಧಿವೃತ್ತದವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ರೋಡ್ ಶೋ ನಡೆಸಿ, ರಾಜಾ ಅಮರೇಶ್ವರ ನಾಯಕ ಪರ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ರೆಕಾರ್ಡ್ ಸ್ಪಿಡ್ ನಲ್ಲಿ ತನಿಖೆ ಮಾಡಿ ತೋರಿಸಲಿ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಆಗಬೇಕು ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರವಾಗಿ ಅಣ್ಣಾಮಲೈ ಅವರು ರೋಡ್‌ ಶೋ ಮಾಡಿ, ಪಕ್ಷದ ಪ್ರಮುಖರೊಂದಿಗೆ ಶನಿವಾರ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಜ್ವಲ್ ಹಾಸನದಿಂದ ಬೆಂಗಳೂರಿಗೆ ಹೋಗುವಾಗಲೇ ಚೆಕ್‌ಪೋಸ್ಟ್ ಹಾಕಿ ಅವರನ್ನು ಹಿಡಿಯಬಹುದಿತ್ತು. ರಾಜ್ಯ ಸರ್ಕಾರ ಸುಮೋಟೊ ಕೇಸ್ ಮಾಡಬೇಕಿತ್ತು ಎಂದು ಗೃಹ ಸಚಿವ ಅಮಿತ್ ಷಾ ಕೂಡ ಹೇಳಿದ್ದಾರೆ. ಎಚ್.ಡಿ.ದೇವೆಗೌಡರು ಕೂಡ ಪ್ರಜ್ವಲ್‌ರನ್ನು ಸಸ್ಪೆಂಡ್ ಮಾಡಿದ್ದಾರೆ. ಪಾಲಿಟಿಕ್ಸ್‌ನಲ್ಲಿ ಏನು ಆಗಬಾರದಿತ್ತೋ ಅದು ಆಗಿದೆ. ಎಸ್‌ಐಟಿ ತನಿಖೆ ಮಾಡಲಿ. ಸಂತ್ರಸ್ತೆಯರಿಗೆ ನ್ಯಾಯ ಸಿಗಲಿ ಎಂದರು.

ಕಾಂಗ್ರೆಸ್‌ನವರು ಹಿಂದೆ ಜೆಡಿಎಸ್ ಜತೆ ಮೈತ್ರಿಯಲ್ಲಿದ್ದರು. ಆಗ ಏನು ಮಾತನಾಡಲಿಲ್ಲ. ಈಗ ನೋಡಿದರೆ ಉಲ್ಟಾ ಮಾತನಾಡುತ್ತಿದ್ದಾರೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಇದಕ್ಕೂ ಏನು ಸಂಬಂಧ? ಎಲ್ಲ ಸಂಸದರಿಗೂ ಡಿಪ್ಲೋಮೇಟಿಕ್ ಪಾಸ್ ಇದೆ. ಡಿಕೆಶಿ, ನಮ್ಮ ಡಿ.ಕೆ.ಸುರೇಶ್‌ಗೂ ಡಿಪ್ಲೋಮೇಟಿಕ್ ಪಾಸ್ ಇದೆ. ಆದರೆ, ಪ್ರಜ್ವಲ್ ಹೋಗಿದ್ದು ಖಾಸಗಿಯಾಗಿ, ಪಾಸ್‌ಪೋರ್ಟ್ ರದ್ದು ಮಾಡುವ ಹಕ್ಕು ನ್ಯಾಯಾಲಯಕ್ಕಿದೆ. ರಾಜ್ಯ ಸರ್ಕಾರ ಬೇಸಿಕ್ ಹೋಮ್ ವರ್ಕ್ ಕೂಡ ಮಾಡಿಲ್ಲ ಎಂದು ಟೀಕಿಸಿದರು.

ಜೆಡಿಎಸ್ & ಬಿಜೆಪಿ ಬೇರೆ ಬೇರೆ ಪಕ್ಷ. ಮೈತ್ರಿಯಲ್ಲಿದ್ದೇವೆ ಅಷ್ಟೇ. ಇಬ್ಬರೂ ಒಂದೇ ಪಕ್ಷ ಆಗಿದ್ದರೆ ಮರ್ಜ್ ಮಾಡಬಹುದಿತ್ತು ಅಲ್ವಾ? ಬೇರೆ ಬೇರೆ ಇದ್ದರೂ ಎನ್‌ಡಿಎದಲ್ಲಿ ಎಲ್ಲರೂ ಒಂದಾಗಿದ್ದಾರೆ. ಕಾರಣ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದಾಗಿದೆ. ಕಾಂಗ್ರೆಸ್ ಬಳಿ ಮಾತನಾಡಲು ಬೇರೆ ವಿಷಯಗಳಿಲ್ಲ. ಕಾಂಗ್ರೆಸ್‌ಗೆ ಈ ಬಾರಿ 50ಕ್ಕಿಂತ ಕಡಿಮೆ ಸ್ಥಾನ ಬರುತ್ತದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಲ್ಲ. ರಾಹುಲ್ ಕೊನೆ ಕ್ಷಣದಲ್ಲಿ ರಾಯಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಮೂರು ಬಾರಿ ಅಮೇಥಿಯಲ್ಲಿ ಗೆಲುವು ಕಂಡಿದ್ದರು. ಈಗ ಅಲ್ಲಿ ಹೋಗಲು ಅವರಿಗೆ ಮುಖ ಇಲ್ಲ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್‌, ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.