ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ನಿಧನ

| Published : May 06 2024, 12:35 AM IST

ಸಾರಾಂಶ

ಮಾದಯ್ಯ ಅವರು ಕುಲಪತಿಯಾಗಿದ್ದಾಗ ಮಂಡ್ಯ ಸರ್‌ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿದ್ದರು. ಅಲ್ಲದೇ ಮಹದೇಶ್ವರ ಬೆಟ್ಟದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ಅವರು ಭಾನುವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಪ್ರೊ.ಇಂದುಮತಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ.

ಮಾದಯ್ಯ ಅವರ ಪುತ್ರಿ ಅಮೆರಿಕೆಯಲ್ಲಿದ್ದು, ಅವರ ಬಂದ ನಂತರ ಮಂಗಳವಾರ ಅಂತ್ಯಸಂಸ್ಕಾರ ನಡೆಸಲಾಗುವುದು. ಅದಕ್ಕೂ ಮುಂಚೆ ಸರಸ್ವತಿಪುರಂನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾದಯ್ಯ ಅವರು 1991 ರಿಂದ 1997 ರವರೆಗೆ [ಮೂರು ವರ್ಷಗಳ ಎರಡು ಅವಧಿ] ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.

ಮಾದಯ್ಯ ಅವರು ಕುಲಪತಿಯಾಗಿದ್ದಾಗ ಮಂಡ್ಯ ಸರ್‌ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿದ್ದರು. ಅಲ್ಲದೇ ಮಹದೇಶ್ವರ ಬೆಟ್ಟದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಿದ್ದರು. ಅದು ಮುಚ್ಚಿ. ಚಾಮರಾಜನಗರದಲ್ಲಿ ಆರಂಭವಾಯಿತು. ಈಗ ಚಾಮರಾಜನಗರ ವಿವಿಯಾಗಿದೆ. ಅದೇ ರೀತಿ ಹಾಸನ ಸ್ನಾತಕೋತ್ತರ ಕೇಂದ್ರ ಹಾಸನ ವಿವಿ ಆಗಿದೆ.

1991 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅಮೃತ ಮಹೋತ್ಸವ ಆಚರಿಸಿಕೊಂಡಿತ್ತು. ಅಂದಿನ ರಾಷ್ಟ್ರಪತಿ ಡಾ.ಶಂಕರ್‌ ದಯಾಳ್‌ ಶರ್ಮ ಅವರು ಭಾಗವಹಿಸಿದ್ದರು. ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಪ್ರೊ. ಮಾದಯ್ಯ ಅವರು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್‌ ಅವರ ಆಪ್ತ ಸ್ನೇಹಿತರಾಗಿದ್ದರು. ಡಾ.ಸಿಂಗ್‌ ಅವರು ಮೈವಿವಿ ಘಟಿಕೋತ್ಸವದಲ್ಲಿ ಕೂಡ ಭಾಗವಹಿಸಿದ್ದರು.

ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಮಾದಯ್ಯ ಅವರ ಪತ್ನಿ ಪ್ರೊ.ಇಂದುಮತಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರು.

ಸಂತಾಪ

ಪ್ರೊ.ಎಂ. ಮಾದಯ್ಯ ಅವರ ನಿಧನಕ್ಕೆ ಪ್ರೊ.ಬಿ.ಕೆ. ಜಗದೀಶ್‌, ಪ್ರೊ.ಕೆ.ಟಿ. ವೀರಪ್ಪ ಅವರು ಸಂತಾಪ ಸೂಚಿಸಿದ್ದಾರೆ.