ಕನ್ನಡ ನಾಡು, ನುಡಿ ರಕ್ಷಣೆ ಮಾಡಿ: ಕೃಷ್ಣಮೂರ್ತಿ ಕರೆ

| Published : May 07 2024, 01:03 AM IST

ಸಾರಾಂಶ

ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಆಯೋಜನೆಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್, ಅಂಚೆ ಕಚೇರಿಯ ಹಣಕಾಸಿನ ವ್ಯವಹಾರ ಜ್ಞಾನಗಳಿಸಲು ವಿಜ್ಞಾನ ವಿಭಾಗ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದೇವೆ. ಇದರ ಶ್ರಮದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯಿಂದ ಸ್ಥಾಪಿತಗೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡನಾಡು, ನುಡಿ, ನೆಲ, ಜಲ ಸಂರಕ್ಷಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬರಹಗಾರ ಹಾಗೂ ಸಿಡಿಪಿಒ ಕೃಷ್ಣಮೂರ್ತಿ ಶ್ಲಾಘಿಸಿದರು.

ಪಟ್ಟಣದ ತಾಲೂಕು ಕಸಾಪ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿ ಮಾತನಾಡಿ, ಕನ್ನಡ ನಾಡು ನುಡಿಯ ಅಸ್ಮಿತೆಯ ಹೆಮ್ಮೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಜನ ಸಾಮಾನ್ಯರ ಪರಿಷತ್ ಆಗಿ ರೂಪುಗೊಂಡಿದೆ ಎಂದರು.

ಹಿರಿಯ ಸಾಹಿತಿ ತಿಮ್ಮರಾಯಿಗೌಡ ಮಾತನಾಡಿ, ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಆಯೋಜನೆಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್, ಅಂಚೆ ಕಚೇರಿಯ ಹಣಕಾಸಿನ ವ್ಯವಹಾರ ಜ್ಞಾನಗಳಿಸಲು ವಿಜ್ಞಾನ ವಿಭಾಗ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದೇವೆ. ಇದರ ಶ್ರಮದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅಪಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಖರಡ್ಯ ಬಸವೇಗೌಡ ಮಾತನಾಡಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿ 87ನೇ ಸಮ್ಮೇಳನದ ಆತಿಥ್ಯವನ್ನು ಮಂಡ್ಯ ಜಿಲ್ಲೆ ವಹಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಇಂದು ಏಷ್ಯಾ ಖಂಡದಲ್ಲಿಯೇ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಇತರೆ ಭಾಷೆಗಳನ್ನು ಗೌರವಿಸುವ, ಕನ್ನಡವನ್ನು ಹೆಚ್ಚು ಬಳಸುವ ಹಾಗೂ ಅನ್ಯರಿಗೆ ಕನ್ನಡವನ್ನು ಕಲಿಸುವ ಕೆಲಸವಾಗಬೇಕಿದೆ ಎಂದರು.

ಇದೇ ವೇಳೆ ತಾಲೂಕಿನ ಎ.ನಾಗತಿಹಳ್ಳಿಯ ಸಾವಯವ ಕೃಷಿಕ ವಿರೂಪಾಕ್ಷ ಮೂರ್ತಿ ಅವರನ್ನು ಗೌರವಿಸಲಾಯಿತು. ತಾಲೂಕು ಕಸಾಪ ಪದಾಧಿಕಾರಿಗಳಾದ ನಯಾಜ್‌ ಪಾಷ, ಗಿರೀಶ್, ಆನಂದಮೂರ್ತಿ, ಅಶೋಕ್ ಕುಮಾರ್, ಮಂಜುಳಾ ಸುರೇಶ್, ಕೇಶವದೇವ, ಉಮಾ, ಸೌಂದರ್ಯ, ಜ್ಯೋತಿ, ಚನ್ನಬಸವ, ನಾಗರಾಜು, ಪ್ರಗತಿಪರ ರೈತ ರಾಮನಂಜಯ್ಯ ಸೇರಿದಂತೆ ಹಲವರು ಇದ್ದರು.