ಪೆನ್‌ಡ್ರೈವ್‌ ಪ್ರಕರಣ: ಜನಪರ ಒಕ್ಕೂಟದಿಂದ ಚನ್ನರಾಯಪಟ್ಟಣದಲ್ಲಿ ಧರಣಿ

| Published : May 06 2024, 12:34 AM IST

ಪೆನ್‌ಡ್ರೈವ್‌ ಪ್ರಕರಣ: ಜನಪರ ಒಕ್ಕೂಟದಿಂದ ಚನ್ನರಾಯಪಟ್ಟಣದಲ್ಲಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಿ, ಮಹಿಳೆಯರನ್ನು ರಕ್ಷಿಸುವಂತೆ ಆಗ್ರಹಿಸಿ ಜನಪರ ಚಳುವಳಿಗಳ ಒಕ್ಕೂಟ ಚನ್ನರಾಯಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ರೇವಣ್ಣ, ಪ್ರಜ್ವಲ್‌ರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ । ಸಂತ್ರಸ್ತೆಯರನ್ನು ರಕ್ಷಿಸಿ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪೆನ್‌ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಿ, ಮಹಿಳೆಯರನ್ನು ರಕ್ಷಿಸುವಂತೆ ಆಗ್ರಹಿಸಿ ಜನಪರ ಚಳುವಳಿಗಳ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿತು.

ಪಟ್ಟಣದ ಗಾಂಧಿ ವೃತ್ತದಿಂದ ಬಿ.ಎಂ.ರಸ್ತೆ ಮಾರ್ಗವಾಗಿ ಕೆ.ಆರ್.ವೃತ್ತದಿಂದ ತಾಲೂಕು ಕಚೇರಿ ಆವರಣದ ಎದುರು ಜಮಾವಣೆಗೊಂಡ ಪ್ರತಿಭಟನಾ ನಿರತರು ಪ್ರಜ್ವಲ್ ವಿರುದ್ಧ ಪ್ರತಿಭಟನಾ ಘೋಷಣೆಯನ್ನು ಕೂಗಿದರು.

ನಂತರ ಮಾತನಾಡಿದ ಕೆಪಿಆರ್‌ಎಸ್ ಜಿಲ್ಲಾ ಮುಖಂಡ ಮಂಜುನಾಥ್, ‘ಕಳೆದ ಕೆಲವು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಇವು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತೀ ದಿನ ಹೊಸಹೊಸ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ. ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್‌ಡ್ರೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗಿ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಎಂಬ ಆತಂಕ ಮತ್ತು ಕುತೂಹಲ ಎಲ್ಲೆಡೆ ಹರಡಿದೆ. ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗಿದ್ದು ಇವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷರಾದ ಮಾಳೇನಹಳ್ಳಿ ಹರೀಶ್ ಹಾಗೂ ಸಿ. ಜಿ.ರವಿ ಮಾತನಾಡಿ, ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾದವಾಗುತ್ತದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದು ಅತ್ಯಂತ ಹೀನ ಕೃತ್ಯವಾಗಿದೆ ಎಂದು ಕಿಡಿಕಾರಿದರು.

ಇಂತಹ ಹೀನ ಕೃತ್ಯ ನಡೆಸಿರುವ ವ್ಯಕ್ತಿಯ ಮತ್ತು ಕುಟುಂಬದ ರಾಜಕೀಯ ಪ್ರಭಾವ ಕೆಲಸ ಮಾಡಿರುವ ಸಾಧ್ಯತೆಯಿದೆ. ಆದರೆ ಯಾವ ಯಾವ ಒತ್ತಡಗಳ ಕಾರಣಕ್ಕೂ, ಕೆಲಸ ಕಾರ್ಯ ಮತ್ತು ಪ್ರಯೋಜನದ ಕಾರಣಕ್ಕೋ ಆತನಿಂದ ಲೈಂಗಿಕವಾಗಿ ಬಳಕೆಯಾಗಿ ವಿಡಿಯೋ ದೃಶ್ಯಗಳಲ್ಲಿ ಸೆರೆಯಾಗಿ ಸಾರ್ವಜನಿಕವಾಗಿ ಮಾನ ಕಳೆದುಕೊಳ್ಳುತ್ತಿರುವ ಮಹಿಳೆಯರು ಮತ್ತವರ ಕುಟುಂಬದ ಗೋಳು ಮಾತ್ರ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ ಎಂದು ಒತ್ತಾಯಿಸಿದರು.

ಕೂಡಲೇ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಸಾಧ್ಯವಾದಷ್ಟು ಬೇಗ ನೂರಾರು ಮಹಿಳೆಯರ ಮೇಲೆ ಲೈಂಗಿಕ ಅಕ್ರಮ, ಅತ್ಯಾಚಾರ ನಡೆಸಿ ಅವುಗಳನ್ನು ಚಿತ್ರೀಕರಿಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನೂ ಹಾಗೂ ಅವುಗಳನ್ನು ಸಾರ್ವಜನಿಕರಿಗೆ ಪೆನ್‌ಡೈವ್ ಮುಖಾಂತರ ಹಂಚುತ್ತಿರುವ ವ್ಯಕ್ತಿಗಳನ್ನೂ ಬಂಧಿಸಬೇಕು. ಸಂತ್ರಸ್ತ ಮಹಿಳೆಯರು ಮತ್ತವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಚನ್ನರಾಯಪಟ್ಟಣ ಜನಪರ ಚಳುವಳಿಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.

ರೈತ ಸಂಘದ ಮಹಿಳಾ ಘಟಕದ ಪ್ರೇಮಮ್ಮ, ನಾಗರತ್ನಮ್ಮ, ಅಹಿಂದ ಸಂಘಟನೆ ತಾಲೂಕು ಅಧ್ಯಕ್ಷ ಉತ್ತೇನಹಳ್ಳಿ ಚಂದ್ರು, ಸಾಣೇನಹಳ್ಳಿ ಮಧುಕುಮಾರ್, ಗಿರೀಶ್ ಇತರರಿದ್ದರು.