ಕುಡಿವ ನೀರಿಗಾಗಿ ಸವಡಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

| Published : May 18 2024, 12:43 AM IST

ಕುಡಿವ ನೀರಿಗಾಗಿ ಸವಡಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜನತೆಯ ಅಗತ್ಯ ಮೂಲ ಸೌಲಭ್ಯಗಳಿಗೆ ಸ್ಪಂದಿಸಬೇಕಾದ ಗ್ರಾಪಂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ

ರೋಣ: ಕಳೆದ 20 ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ನಿತ್ಯ ದುಡಿಮೆ ಬಿಟ್ಟು ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುವಂತಾಗಿದೆ ಎಂದು ಆರೋಪಿಸಿ ತಾಲೂಕಿನ ಸವಡಿ ಗ್ರಾಮದ 2ನೇ ವಾರ್ಡ್‌ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಬೀಗ ಜಡೆದು ಪ್ರತಿಭಟನೆ ನಡೆಸಿದರು.

ಕಳೆದ 2 ವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ಕಾಟಾಚಾರಕ್ಕೆ ಎಂಬಂತೆ ಕುಡಿಯಲು ಯೋಗವಲ್ಲದ, ಬಳಕೆಗೆ ಬಾರದ ಸವುಳು ನೀರನ್ನು ಪೂರೈಸುತ್ತಾರೆ. ಸಿಹಿ ನೀರು ಪೂರೈಸುವಂತೆ ಗ್ರಾಪಂ ಪಿಡಿಒ ಮತ್ತು ಆಡಳಿತ ಮಂಡಳಿ ಗಮನಕ್ಕೆ ಅನೇಕ ಬಾರಿ ತಂದರೂ ಈವರೆಗೂ ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. 2ನೇ ವಾರ್ಡ್‌ ಹೊರತುಪಡಿಸಿ ಗ್ರಾಮದ ಉಳಿದ ವಾರ್ಡ್‌ಗಳಿಗೆ ನಿತ್ಯ ಸಿಹಿ ನೀರು ಪೂರೈಕೆಯಾಗುತ್ತಿದೆ. ಬಟ್ಟೆ, ಪಾತ್ರೆ ತೊಳೆಯಲು ಮಾತ್ರ ಸವುಳು ನೀರು ಉಪಯೋಗವಾಗಿದ್ದು, ಜಾನುವಾರಗಳಿಗೆ ತೊಂದರೆಯಾಗುತ್ತಿದೆ. ಜನತೆಯ ಅಗತ್ಯ ಮೂಲ ಸೌಲಭ್ಯಗಳಿಗೆ ಸ್ಪಂದಿಸಬೇಕಾದ ಗ್ರಾಪಂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಬಿಒಟಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾ ಅನಗತ್ಯ ಕಾಲಹರಣ ಮಾಡುತ್ತಿದ್ದಾರೆ. ನೀರು ಪೂರೈಕೆ ಕುರಿತು ನೀರು ಸರಬರಾಜು ಸಿಬ್ಬಂದಿ ಕೇಳಿದಲ್ಲಿ ನಮ್ಮ‌ ಮೇಲೆಯೆ ಹರಿಹಾಯ್ದು ಏರುಧ್ವನಿಯಲ್ಲಿ ಗದರಿಸುತ್ತಾರೆ. ನೀರು ಬಿಡದಿದ್ದರೇ ಏನು ಮಾಡುತ್ತೀರಿ, ನೀರು ಬರುವಾಗ ಬರುತ್ತದೆ, ತಡೆಯಿರಿ ಎನ್ನುತ್ತಾರೆ. ಈ ರೀತಿಯ ಸಿಬ್ಬಂದಿಯ ಎಡವಟ್ಟಿನ ಮಾತಿನಿಂದ ನಮಗೆ ತೀವ್ರ ಬೇಸರವಾಗಿದೆ ಎಂದು ಅಳಲು ತೋಡಿಕೊಂಡ ಪ್ರತಿಭಟನಾ ನಿರತರು, ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ರೋಣ ತಹಸೀಲ್ದಾರ, ಜಿಪಂ ಸಿಇಒ ಬರುವಂತೆ ಪ್ರತಿಭಟನಾ ನಿರತರು ಪಟ್ಟು ಹಿಡಿದರು.

ಸುದ್ದಿ ತಿಳಿದ ಗ್ರಾಪಂ ಪಿಡಿಒ ಬಸವರಾಜ ಶೃಂಗೇರಿ ಪ್ರತಿಭಟನಾ ನಿರತ ಸ್ಥಳಕ್ಕೆ ದೌಡಾಯಿಸಿ, ಕೂಡಲೇ 2 ವಾರ್ಡ್‌ಗೆ ಸಮರ್ಪಕ ನೀರು ಪೂರೈಸುವುದು ಮತ್ತು ಗ್ರಾಮಗಳಲ್ಲಿ ಯಾವುದೇ ರೀತಿಯಿಂದ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗೖತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ 2 ನೇ ವಾರ್ಡ್‌ನ ಮಹಿಳೆಯರು, ಮಕ್ಕಳು,ವೃದ್ದರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ನೀರು ಸರಬರಾಜು ಸಿಬ್ಬಂದಿ ಜನರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಗ್ರಾಪಂಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಕಳೆದ ವಾರದಿಂದ ಡಿಬಿಒಟಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ 2 ನೇ ವಾರ್ಡ್‌ಗೆ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ನಿತ್ಯವೂ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ.ಕುಡಿವ ನೀರಿಗಾಗಿ ಅಲ್ಲಿ ಶುದ್ದ ನೀರಿನ ಘಟಕವಿದೆ. 2ನೇ ವಾರ್ಡಗೆ ನೀರಿನ ಸಮಸ್ಯೆ ನಿವಾರಣೆಗಾಗಿ ಶಾಸಕರು‌ ₹ 4.90 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವದು ಎಂದು ಸವಡಿ ಗ್ರಾಪಂ ಪಿಡಿಒ ಬಸವರಾಜ ಶೃಂಗೇರಿ ತಿಳಿಸಿದ್ದಾರೆ.