ನೀರಿಗಾಗಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

| Published : May 05 2024, 02:00 AM IST

ಸಾರಾಂಶ

ಗ್ರಾಮದಲ್ಲಿನ ಖಾಸಗಿ ಬೋರ್ ವೆಲ್ ಅಥವಾ ಬಾವಿಗಳ ಬಳಿ ನೀರು ತರೋಣ ಎಂದರೇ ಅಲ್ಲಿಯೂ ನೀರಿಲ್ಲ. ಕುಡಿಯಲು ನೀರು ತರಲು ವಾಹನಗಳಲ್ಲಿ ಗುಡಿಬಂಡೆ ಪಟ್ಟಣಕ್ಕೆ ಬರಬೇಕಾದ ಸ್ಥಿತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸುಮಾರು 15 ದಿನಗಳಿಂದ ನೀರಿನ ಸಮಸ್ಯೆಯಾಗಿದ್ದರೂ ಗ್ರಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ, ಸಮಸ್ಯೆ ಬಗ್ಗೆ ತಾ.ಪಂ. ಇ.ಒ ಗೆ ಕರೆ ಮಾಡಿ ಹೇಳಿದರೇ ಟೈಂ ಪಾಸ್ ಮಾಡೋಕೆ ಪೋನ್ ಮಾಡ್ತೀರಾ ಎಂದು ಉಡಾಫೆ ಉತ್ತರ ಕೊಡುತ್ತಾರೆ ಎಂದು ಆರೋಪಿಸಿ ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ನೀರಿಗಾಗಿ ಪರಿತಪಿಸುವಂತಾಗಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುವಂತಾಗಿದೆ. ಈ ಕುರಿತು ನಾವು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದೇವೆ. ನಮ್ಮ ಸಮಸ್ಯೆಯನ್ನು ಆಲಿಸಲು ಯಾವುದೇ ಅಧಿಕಾರಿ ಗ್ರಾಮಕ್ಕೆ ಬರಲಿಲ್ಲ ಎಂದರು.

ನೀರಿಗಾಗಿ ಪಟ್ಟಣಕ್ಕೆ ಬರಬೇಕು

ಗ್ರಾಮದಲ್ಲಿನ ಖಾಸಗಿ ಬೋರ್ ವೆಲ್ ಅಥವಾ ಬಾವಿಗಳ ಬಳಿ ನೀರು ತರೋಣ ಎಂದರೇ ಅಲ್ಲಿಯೂ ನೀರಿಲ್ಲ. ಕುಡಿಯಲು ನೀರು ತರಲು ವಾಹನಗಳಲ್ಲಿ ಗುಡಿಬಂಡೆ ಪಟ್ಟಣಕ್ಕೆ ಬರಬೇಕಾದ ಸ್ಥಿತಿ ಉಂಟಾಗಿದೆ. ಆದರೆ ವಾಹನಗಳಿರುವವರು ನೀರು ತಂದುಕೊಳ್ಳುತ್ತಾರೆ. ಯಾವುದೇ ವಾಹನ ಇಲ್ಲದಂತಹವರು ಏನು ಮಾಡಬೇಕು. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕೆಂದು ಗ್ರಾ.ಪಂ. ಕಚೇರಿ ಮುಂಭಾಗ ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಷ ಹೊರಹಾಕಿದರು.

ಬಳಿಕ ಕೊಂಡರೆಡ್ಡಿಹಳ್ಳಿ ಗ್ರಾ.ಪಂ ಸದಸ್ಯ ನಾಗರಾಜು ಮಾತನಾಡಿ, ನೀರಿನ ಸಮಸ್ಯೆಯ ಬಗ್ಗೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗೆ ತಿಳಿಸಿದ್ದೆ. ವಿದ್ಯುತ್ ಸಮಸ್ಯೆಯನ್ನು ಹೇಳಿ ನುಣುಚಿಕೊಳ್ಳುವ ಉತ್ತರ ನೀಡುತ್ತಾರೆ. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆ ಬಗೆಹರಿಸದೇ ಇದ್ದರೇ ಗುಡಿಬಂಡೆ ತಾಲೂಕು ಪಂಚಾಯತಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸಮಸ್ಯೆ ಪರಿಹರಿಸುವ ಭರವಸೆ

ಬಳಿಕ ಸ್ಥಳಕ್ಕೆ ಆಗಮಿಸಿದ ಪಿಡಿಒ ನರಸಿಂಹಮೂರ್ತಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಪಿಡಿಒ ಹಾಗೂ ಗ್ರಾಮಸ್ಥರ ನಡುವೆ ವಾಗ್ದಾಳಿ ಸಹ ನಡೆಯಿತು. ಮುಂದಿನ 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ತಾತ್ಕಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.