ನೇಹಾ ಹಿರೇಮಠ ಹತ್ಯೆ ಖಂಡಿಸಿ ಪ್ರತಿಭಟನಾ ರ್‍ಯಾಲಿ

| Published : Apr 26 2024, 12:50 AM IST

ಸಾರಾಂಶ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ, ಇಲ್ಲಿನ ವಿವಿಧ ಮಹಿಳಾ ಸಂಘಟನೆಗಳು ಬುಧವಾರ ರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟನಾ ರ್‍ಯಾಲಿ ನಡೆಸಿ ಕೂಡಲೇ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದವು.

ಕಾರಟಗಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದಬತ್ತಿ ಮೆರವಣಿಗೆಕನ್ನಡಪ್ರಭ ವಾರ್ತೆ ಕಾರಟಗಿ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ, ಇಲ್ಲಿನ ವಿವಿಧ ಮಹಿಳಾ ಸಂಘಟನೆಗಳು ಬುಧವಾರ ರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟನಾ ರ್‍ಯಾಲಿ ನಡೆಸಿ ಕೂಡಲೇ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದವು.

ಇಲ್ಲಿನ ಐತಿಹಾಸಿಕ ಮಹಾದೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ಹೆಜ್ಜೆ ಮಹಿಳಾ ಸಂಘಟನೆ ನೇತೃತ್ವದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ಸದಸ್ಯೆಯರು ನೇಹಾ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಿದರು. ಆನಂತರ ಕ್ಯಾಂಡಲ್ ಹಚ್ಚಿ ಆರ್.ಜಿ. ರಸ್ತೆಯ ಮೂಲಕ ನವಲಿ ವೃತ್ತದ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ರ್‍ಯಾಲಿಯು ನವಲಿ ವೃತ್ತ ತಲುಪುತ್ತಿದ್ದಂತೆ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧ ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆ ನಡೆಸಿದ ಮಹಿಳೆಯರು ‘ಅಮರ್ ರಹೇ ನೇಹಾ ಹಿರೇಮಠ ಅಮರ್ ರಹೇ'''' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರ್‍ಯಾಲಿಯ ನೇತೃತ್ವ ವಹಿಸಿದ್ದ ಹೆಜ್ಜೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಡಾ. ಶಿಲ್ಪಾ ದಿವಟರ್, ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಹಿರೇಮಠ ವಕೀಲರು, ವಿಜಯಲಕ್ಷ್ಮಿ ಮೇಲಿನಮನಿ ಮಾತನಾಡಿ, ಕಾಲೇಜಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ತಲೆ ತಗ್ಗಿಸುವಂಥ ಘಟನೆಯಾಗಿದೆ. ನೇಹಾಳ ಪಾಲಕರಿಗೆ, ರಾಜ್ಯದ ಜನರಿಗೆ ಈ ಘಟನೆ ತುಂಬಾ ನೋವು ತರಿಸಿದೆ. ಇಂಥ ಘಟನೆಗಳು ಯಾವ ಹೆಣ್ಣು ಮಕ್ಕಳ ಮೇಲೂ ಮರುಕಳಿಸಬಾರದು. ಇದೇ ಕೊನೆಯಾಗಬೇಕಾದರೆ ಆರೋಪಿಯನ್ನು ಕೂಡಲೇ ಎನ್‌ಕೌಂಟರ್ ಮಾಡಿ ಇಲ್ಲವೆ ಗಲ್ಲು ಶಿಕ್ಷೆ ವಿಧಿಸಿ, ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಸ್ಲಿಂ ಸಮುದಾಯದ ಪ್ರಮುಖರಾದ ಸಿರಾಜ್ ಹುಸೇನ್, ನಿವೃತ್ತ ಶಿಕ್ಷಕ ಅಲಿ ಹುಸೇನ್ ಮತ್ತು ಜಾಮಿಯಾ ಮಜ್ಜಿದ್ ಮಾಜಿ ಅಧ್ಯಕ್ಷ ಬಾಬುಸಾಬ್ ಬಳಿಗೇರ್ ಮಾತನಾಡಿ, ಕೊಲೆಗೈದ ಯುವಕ ಫಯಾಜ್‌ಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಶಿಕ್ಷೆ ಹೇಗಿರಬೇಕು ಎಂದರೆ ಮುಂದೆ ಈ ತರಹದ ಘಟನೆಗಳು ಮರುಕಳಿಸಬಾರದು. ಯಾರೊಬ್ಬರನ್ನೂ ಕೊಲ್ಲುವ ಹಕ್ಕು ನಮಗಿಲ್ಲ. ಇಂಥದ್ದನ್ನು ಧರ್ಮಾತೀತವಾಗಿ, ಜಾತ್ಯತೀತವಾಗಿ ಖಂಡಿಸುವ ಕೆಲಸವಾಗಬೇಕು. ಆಗಲೇ ಸಮಾಜದಲ್ಲಿ ಸಾಮರಸ್ಯ ಸಾಧ್ಯ. ಇಲ್ಲದಿದ್ದರೆ ಈ ತರಹದ ಕೃತ್ಯಗಳು ಸಮಾಜದ ನೆಮ್ಮದಿ, ಶಾಂತಿಗೆ ಭಂಗ ತರುತ್ತವೆ ಎಂದರು.

ಉಪನ್ಯಾಸಕ ವಿರೂಪಾಕ್ಷೇಶ್ವರ ಸ್ವಾಮಿ, ಮಂಗಳಮುಖಿ ರಮ್ಯಾ, ಪ್ರತಿಭಾ ಮಹಿಳಾ ಸಂಘದ ಸಿ.ಎಚ್. ಗೀತಾ, ಮೂಕಾಂಬಿಕಾ ಮಹಿಳಾ ಸಂಘದ ಎಚ್.ಎಂ. ಸಾವಿತ್ರಿ, ಆರ್ಯವೈಶ್ಯ ಮಹಿಳಾ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಎನ್., ಉಪನ್ಯಾಸಕಿಯರಾದ ಆಶಾ ಶ್ರೇಷ್ಠಿ, ಗಂಗಮ್ಮ ಹಿರೇಮಠ ಮಾತನಾಡಿದರು.

ಪ್ರತಿಭಟನಾ ರ್‍ಯಾಲಿಯಲ್ಲಿ ಪುರಸಭೆ ಮಾಜಿ ಸದಸ್ಯ ಸಿದ್ದರಾಮಯ್ಯಸ್ವಾಮಿ ಹಿರೇಮಠ, ಜಂಗಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ವಪ್ರಕಾಶ ಹಿರೇಮಠ, ಪುಟ್ಟಮ್ಮ ಕಂಡಿಮಠ, ಸಿದ್ದಲಿಂಗಮ್ಮ, ಮೀನಾಕ್ಷಿ ಶೀಲವಂತರ್, ಕವಿತಾ ಹಿರೇಮಠ, ರಾಜೇಶ್ವರಿ ಹಂಚಿನಾಳಮಠ, ರಾಜೇಶ್ವರಿ ಹಿರೇಮಠ, ಪೂಜಾ ಪಾಟೀಲ್, ಶೀಲಾ ಸಜ್ಜನ್, ಹಂಪಮ್ಮ ದಿವಟರ್, ನರ್ಮದಾ, ರಾಜೇಶ್ವರಿ, ಎಚ್. ಸುಜಾತಾ, ಎಸ್. ಈರಮ್ಮ, ವೀರಸಾವರ್ಕರ್ ಯೂಥ್ ಸೇವಾ ಟ್ರಸ್ಟ್‌ನ ಯುವಕರು ಇದ್ದರು.