ಜೂನ್‌ 3ರಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ

| Published : May 05 2024, 02:01 AM IST

ಜೂನ್‌ 3ರಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಮಾಡಲಾಗಿದೆ. ಮೇ ೨ರಿಂದ ನೀತಿಸಂಹಿತೆ ಅನ್ವಯವಾಗುತ್ತದೆ. ಲೋಕಸಭಾ ಚುನಾವಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ತಂಡಗಳೇ ಈ ಚುನಾವಣೆಗೂ ನಿಗಾ ವಹಿಸುತ್ತವೆ

ಕನ್ನಡಪ್ರಭ ವಾರ್ತೆ ಕೋಲಾರಲೋಕಸಭಾ ಚುನಾವಣೆ ಬೆನ್ನಲ್ಲೇ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ನಾಮಪತ್ರ ಸಲ್ಲಿಕೆ ಮಾಡಲು ಮೇ ೧೬ರಂದು ಕೊನೆ ದಿನಾಂಕ ನಿಗದಿ ಮಾಡಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅಕ್ರಂ ಪಾಷ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನಾಮಪತ್ರ ನಮೂನೆ ಪಡೆದುಕೊಂಡು ಮೇ ೧೬ರೊಳಗೆ ಸಲ್ಲಿಸಬಹುದಾಗಿದೆ ಎಂದರು.

ಜೂನ್‌ 3ರಂದು ಚುನಾವಣೆ

ನಾಮಪತ್ರ ಮೇ ೧೭ ರಂದು ಪರಿಶೀಲನೆ ನಡೆಸಲಿದ್ದು, ಮೇ ೨೦ರೊಳಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶ ನೀಡಲಾಗಿದೆ. ಜೂ.೩ ರಂದು ಬೆಳಿಗ್ಗೆ ೮ ರಿಂದ ೪ ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜೂ.೬ ರಂದು ಮತ ಎಣಿಕೆ ನಡೆಯಲಿದ್ದು, ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂ.೧೨ ರಂದು ಪೂರ್ಣಗೊಳ್ಳುತ್ತದೆ. ಆಗ್ನೇಯ ಶಿಕ್ಷಕರ ವ್ಯಾಪ್ತಿಗೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳು ಸೇರಿವೆ ಎಂದರು.

ಆಗ್ನೇಯ ಕ್ಷೇತ್ರದ ಅಭ್ಯರ್ಥಿಗಳು ಆಯಾ ಕ್ಷೇತ್ರದ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಹಾಗೂ ಇತರೆ ನಾಲ್ಕು ಜನ ಸೂಚಕರು ಸೇರಿದಂತೆ ಐದು ಜನರು ಪ್ರವೇಶಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.ಮಾದರಿ ನೀತಿ ಸಂಹಿತೆ ಜಾರಿ ಈಗಾಗಲೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಮಾಡಲಾಗಿದೆ. ಈ ಚುನಾವಣೆಗೂ ಸಹ ಮೇ ೨ರಿಂದ ಅದೇ ನೀತಿಸಂಹಿತೆ ಅನ್ವಯವಾಗುತ್ತದೆ. ಲೋಕಸಭಾ ಚುನಾವಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ತಂಡಗಳೂ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಗೂ ನಿಗಾ ವಹಿಸುತ್ತವೆ ಎಂದರು.ಮತದಾರರ ಪಟ್ಟಿ ಪರಿಷ್ಕರಣೆಕೋಲಾರ ಜಿಲ್ಲೆಯಲ್ಲಿ ನಿರಂತರ ಪರಿಷ್ಕರಣೆಗೊಳಪಟ್ಟ ಮತದಾರರ ಪಟ್ಟಿಯಲ್ಲಿ ೩೦ನೇ ಡಿಸೆಂಬರ್ ೨೦೨೩ರ ವರೆಗೆ ಒಟ್ಟು ೪೧೪೨ ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದ್ದು ಮೇ ೩ರಿಂದ ೬ರ ಸಂಜೆ ೫.೩೦ರ ವರೆಗೆ ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹತೆ ಹೊಂದಿರುವ ಶಿಕ್ಷಕರು ಆಯಾ ತಾಲೂಕು ಕಚೇರಿಗಳಲ್ಲಿ ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ೪೧೪೨ ಮತದಾರರುಜಿಲ್ಲೆಯಲ್ಲಿ ಒಟ್ಟು ೪೧೪೨ ಮತದಾರರಿದ್ದು, ಈ ಪೈಕಿ ೨೧೨೮ ಮಂದಿ ಪುರುಷ ಹಾಗೂ ೨೦೧೪ ಮಹಿಳಾ ಮತದಾರರಿದ್ದಾರೆ. ಕೋಲಾರದಲ್ಲಿ ೧೪೩೭, ಮಾಲೂರು ೪೫೮, ಬಂಗಾರಪೇಟೆ ೪೦೦, ಕೆಜಿಎಫ್ ೬೦೯, ಮುಳಬಾಗಿಲು ೫೭೫, ಶ್ರೀನಿವಾಸಪುರ ೬೬೩ ಮತದಾರರು ಇದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು ೭ ಮತ ಕೇಂದ್ರಗಳನ್ನು ಸ್ಥಾಪಿಸಿದ್ದು, ಶ್ರೀನಿವಾಸಪುರ, ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ ತಾಲೂಕುಗಳಲ್ಲಿ ಆಯಾ ತಾಲೂಕು ಕಚೇರಿಯಲ್ಲಿ ಹಾಗೂ ಕೆಜಿಎಫ್‌ನಲ್ಲಿ ನಗರಸಭೆ ಕಚೇರಿಯಲ್ಲಿ ತಲಾ ಒಂದು ಹಾಗೂ ಕೋಲಾರ ತಾಲೂಕು ಕಚೇರಿಯಲ್ಲಿ ಒಂದು ಆಕ್ಸಿಲರಿ ಮತ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.