ಇವಿಎಂನೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

| Published : May 07 2024, 01:18 AM IST

ಸಾರಾಂಶ

ಎಲ್ಲ ಮತ ಕೇಂದ್ರಗಳಲ್ಲಿ ಎಲ್ಲ ಸುರಕ್ಷತೆ ಹಾಗೂ ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೂ ಕೂಡ ಪೊಲೀಸ್‌ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರನ್ನು ನೇಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ೨೧೫೮೩೬ ಮತದಾರರ ಮತ ಚಲಾಯಿಸಲಿದ್ದು, ೨೩೪ ಮತಗಟ್ಟೆ ತೆರೆಯಲಾಗಿದೆ. ೧೦೬೮ ಮತಗಟ್ಟೆ ಸಿಬ್ಬಂದಿ ಮತ ಯಂತ್ರಗಳೊಂದಿಗೆ ಮತಕೇಂದ್ರಕ್ಕೆ ತೆರಳಿದ್ದಾರೆ, ಎಲ್ಲ ಮತದಾರರು ತಪ್ಪದೆ ಮತದಾನ ಮಾಡಿ ಎಂದು ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ ತಿಳಿಸಿದರು.ಹಾನಗಲ್ಲ ತಾಲೂಕಿನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಎಲ್ಲ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆದಿದ್ದು, ಚುನಾವಣಾ ಸಿಬ್ಬಂದಿಗೆ ಉತ್ತಮ ತರಬೇತಿಯನ್ನೂ ನೀಡಿ ಸರಳ ಚುನವಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ೨೪೩ ಮತಗಟ್ಟೆಗಳಿಗೆ ತಲುಪಲು ಮತಗಟ್ಟೆ ಸಿಬ್ಬಂದಿ ಹಾಗೂ ಮತದಾನ ಸಾಮಗ್ರಿ ಸುರಕ್ಷಿತವಾಗಿ ತಲುಪಿಸಲು ೩೩ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ೨೦ ಖಾಸಗಿ ವಾಹನಗಳನ್ನು ನೇಮಿಸಲಾಗಿದೆ. ಒಟ್ಟು ೫೩ ರೂಟ್‌ಗಳಲ್ಲಿ ಇತರ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯೊಂದಿಗೆ ಸುರಕ್ಷತೆ ಒದಗಿಸಲಾಗಿದೆ.೧೧೦೦೩೦ ಪುರುಷ ಮತದಾರರು, ೧೦೫೮೦೪ ಮಹಿಳಾ ಹಾಗೂ ಇಬ್ಬರು ಇತರ ಮತದಾರರು ಮತದಾನ ಮಾಡಲಿದ್ದಾರೆ. ೨೪೩ರಲ್ಲಿ ೪೮ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ ೫೩೪ ರಕ್ಷಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ.ಎಲ್ಲ ಮತ ಕೇಂದ್ರಗಳಲ್ಲಿ ಎಲ್ಲ ಸುರಕ್ಷತೆ ಹಾಗೂ ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೂ ಕೂಡ ಪೊಲೀಸ್‌ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರನ್ನು ನೇಮಿಸಲಾಗಿದೆ. ಬಿಸಿಲಿನ ಬೇಗೆಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಆರೋಗ್ಯ ಕಾಳಜಿಗಾಗಿ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ನೀರಿನ ವ್ಯವಸ್ಥೆ, ನೆರಳಿಗಾಗಿ ಅಗತ್ಯವಿರುವಲ್ಲಿ ಶಾಮಿಯಾನ, ಕುಳಿತುಕೊಳ್ಳಲು ಕುರ್ಚಿಗಳು, ಸಹಾಯವಾಣಿ ಸೇರಿದಂತೆ ಸರಕ್ಷಿತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ೨೫ ಸೆಕ್ಟರ್ ಟೀಮ್ ಕೂಡ ಪೊಲೀಸ ಸಿಬ್ಬಂದಿಯೊಂದಿಗೆ ಸುರಕ್ಷಿತವಾದ ಮತದಾನಕ್ಕೆ ಸಹಕರಿಸಲಿದೆ.

ಸಖಿ ಮತಗಟ್ಟೆ

ಹಾನಗಲ್ಲ ತಾಲೂಕಿನ ಸಾಂವಸಗಿ, ಹನುಮಸಾಗರ, ಹರವಿ, ಸೇವಾಲಾಲ್‌ ನಗರ, ಹಾನಗಲ್ಲಿನ ಹಜರತ್ ಮಖಬೂಲಿಯಾ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ಭಾಗದ ಮತಕೇಂದ್ರಗಳನ್ನು ಸಖಿ ಮತಗಟ್ಟಯಾಗಿ ಮಾಡಲಾಗಿದೆ. ಹಾನಗಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜು ಪೂರ್ವ ಕುಮಾರೇಶ್ವರ ನಗರದ ಪೂರ್ವ ಭಾಗದ ಮತಗಟ್ಟೆಯನ್ನು ವಿಕಲಚೇತನ ಮತಗಟ್ಟೆ, ಹೇರೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯನ್ನು ವಿಷಯ ಆಧಾರಿತ ಮತಗಟ್ಟೆ, ಅಕ್ಕಿಆಲೂರಿನ ಗ್ರಾಮ ಪಂಚಾಯತ್‌ನಲ್ಲಿ ಇರುವ ಮತಗಟ್ಟೆಯನ್ನು ಯುವ ಅಧಿಕಾರಿ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆ ಎಂದು ಗುರುತಿಸಲಾಗಿದೆ.

ಕಡ್ಡಾಯ ಮತದಾನಈ ಚುನಾವಣೆಯಲ್ಲಿ ಮತದಾನಕ್ಕಾಗಿ ಇಡೀ ತಾಲೂಕಿನಾದ್ಯಂತ ಮತದಾನ ಜಾಗೃತಿಗೆ ಅಧಿಕಾರಿಗಳು ಶ್ರಮಿಸಿದ್ದು, ಹಾನಗಲ್ಲ ತಾಲೂಕಿನ ಎಲ್ಲ ಮತದಾರರು ತಪ್ಪದೆ ಮತದಾನ ಮಾಡುವಂತೆ ತಹಸೀಲ್ದಾರ್‌ ಎಸ್.ರೇಣುಕಮ್ಮ ಮನವಿ ಮಾಡಿದ್ದಾರೆ. ತಡ ಮಾಡದೇ ಬೇಸಿಗೆ ಬಿಸಿಲ ಕಾರಣ ಹೇಳಿ ಮತದಾನದಿಂದ ಹೊರಗುಳಿಯದಂತೆ ಬೆಳಗ್ಗೆಯೇ ಬೇಗ ಬಂದು ಮತದಾನ ಮಾಡುವುದು ಇನ್ನಷ್ಟು ಸುರಕ್ಷಿತ. ಬೆಳಗಿನ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಅವರು ತಿಳಿಸಿದರು.