ವಕೀಲನ ಕೊಲೆಗೆ ಸುಪಾರಿ: ಆರೋಪಿಗಳ ಸೆರೆ

| Published : May 06 2024, 12:35 AM IST / Updated: May 06 2024, 12:36 AM IST

ಸಾರಾಂಶ

ಬೀದರ್‌ ನ್ಯೂಟೌನ್‌ ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಮೂವರ ಬಂಧನ. ವ್ಯಾಜ್ಯದಲ್ಲಿದ್ದ ಜಮೀನು ಖರೀದಿಸಿದ್ದ ವಕೀಲ ಶಿರ್ಕೆ ಅವರ ಕೊಲೆಗೆ 5ಲಕ್ಷ ರು. ಸುಪಾರಿ. ಡಿಎಸ್‌ಪಿ ಶಿವನಗೌಡ ಪಾಟೀಲ್‌ ನೇತೃತ್ವದಲ್ಲಿ ಪಿಐ ಸಂತೋಷ ಎಲ್‌ಟಿ ಕಾರ್ಯಾಚರಣೆ.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಖ್ಯಾತ ವಕೀಲ ಬಾಬಶೆಟ್ಟಿ ಚಂದ್ರಪ್ಪ ಶಿರ್ಕೆ ಅವರ ಕೊಲೆಗೆ ಸುಪಾರಿ ಪಡೆದು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ನ್ಯೂಟೌನ್‌ ಪೊಲೀಸರು ಯಶಸ್ವಿಯಾಗಿದ್ದು, ಸುಪಾರಿ ಕೊಲೆಗೆ ಬಳಸಲಾಗಿದ್ದ ಖಡ್ಗ, ಮಚ್ಚು ಮತ್ತು ಖಾರದ ಪುಡಿ ಸೇರಿದಂತೆ ನಗದನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ.

ಈ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಇಲ್ಲಿನ ಕೆಎಚ್‌ಬಿ ಕಾಲೋನಿಯಲ್ಲಿ ಏ.28ರಂದು ಸಂಜೆ 7.30ರ ಸುಮಾರಿಗೆ ಇಂಡಿಕಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾಬಶೆಟ್ಟಿ ಶಿರ್ಕೆ ವಕೀಲರ ಕಾರನ್ನು ಹಿಂಬಾಲಿಸಿಕೊಂಡು ಬಂದು ಅವರ ಮುಖದ ಮೇಲೆ ಖಾರದ ಪುಡಿ ಎರಚಿ ನಂತರ ಮಚ್ಚಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಅವರ ಮೇಲತ್ತಿಸಿ ಕೊಲೆಗೆ ವಿಫಲ ಯತ್ನ ನಡೆಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌ ಹಾಗೂ ಎಎಸ್‌ಪಿಗಳಾದ ಮಹೇಶ ಮೇಘಣ್ಣನವರ್ ಹಾಗೂ ಚಂದ್ರಕಾಂತ ಪೂಜಾರಿ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಶಿವನಗೌಡ ಪಾಟೀಲ್‌ ಅವರ ನೇತೃತ್ವದಲ್ಲಿ ನೂತನ ನಗರ ಠಾಣೆಯ ಇನ್ಸ್‌ಪೆಕ್ಟರ್‌ ಸಂತೋಷ ಎಲ್‌ಟಿ ಹಾಗೂ ಸಿಬ್ಬಂದಿ ತಂಡ ಕೊಲೆಗೆ ಯತ್ನ ನಡೆದ ಸ್ಥಳದ ಮಹಜರು ನಡೆಸಿ ಸಿಸಿ ಕ್ಯಾಮೆರಾ ಪರಿಶೀಲಿಸಿ ನೋಡಲಾಗಿ ಒಟ್ಟು 6 ಜನರಿಂದ ಈ ಕೃತ್ಯ ನಡೆದಿದೆ ಎಂಬುವದನ್ನು ಪತ್ತೆ ಹಚ್ಚಿದ್ದಾರೆ.

ಹೆಚ್ಚಿನ ತನಿಖೆಯ ನಂತರ ವಕೀಲರು ಖರೀದಿ ಮಾಡಿದ್ದ ಜಮೀನು ವಿವಾದವೇ ಈ ಸುಪಾರಿ ಕೊಲೆಯ ಸಂಚಿಗೆ ಕಾರಣ ಎಂದು ಖಚಿತವಾಗಿ ಕೊಲೆಗೆ ಯತ್ನಿಸಿದವರ ಪೈಕಿ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಎಲ್ಲ ವಿಷಯ ಹೊರಬಿದ್ದಿದೆ. ವ್ಯಾಜ್ಯದ ಜಮೀನು ಖರೀದಿಸಿದ್ದರ ಹಿನ್ನೆಲೆ ಆರೋಪಿಗೆ ವಕೀಲರ ಮೇಲೆ ಮನಸ್ತಾಪವಾಗಿ ಈ ಹಿಂದೆ ತಮ್ಮ ಬಳಿಯಿದ್ದ ಕಾರು ಚಾಲಕನಿಗೆ 5ಲಕ್ಷ ರು.ಗಳಿಗೆ ಕೊಲೆ ಸುಪಾರಿ ನಿಗದಿಪಡಿಸಿ ಮುಂಗಡವಾಗಿ 85ಸಾವಿರ ರು. ಪಾವತಿಸಿದ್ದು ಕೊಲೆ ಯತ್ನ ವಿಫಲವಾಗುತ್ತಿದ್ದಂತೆ ಅವರೆಲ್ಲ ಬಸವಕಲ್ಯಾಣ ಮಾರ್ಗವಾಗಿ ಮಹಾರಾಷ್ಟ್ರದ ಉಮರ್ಗಾ ನಂತರ ಕಲಬುರಗಿಗೆ ಆಗಮಿಸಿ ತಂಗಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಭಾಗವಾದವರ ಪೈಕಿ ದಿಕ್ಷಿತ ಗುಂಡು ಈತನ ಮೇಲೆ ಬೀದರ್‌ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ಮತ್ತು ಶಿವಲಿಂಗಯ್ಯ ಸ್ವಾಮಿ ಈತನ ಮೇಲೆ ತೆಲಂಗಾಣದ ಜಹೀರಾಬಾದ್‌ದಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಡಿಎಸ್‌ಪಿ ಶಿವನಗೌಡ ಪಾಟೀಲ್‌ ನೇತೃತ್ವದಲ್ಲಿ ನೂತನ ನಗರ ಠಾಣೆಯ ಇನ್ಸಪೆಕ್ಟರ್‌ ಸಂತೋಷ ಎಲ್‌ಟಿ ಹಾಗೂ ಅಪರಾಧ ವಿಭಾಗದ ಠಾಣೆಯ ಸಿಬ್ಬಂದಿ ರಾಮಣ್ಣ, ಮಲ್ಲಿಕಾರ್ಜುನ್‌, ನಿಂಗಪ್ಪ, ಧನರಾಜ, ಭರತ ಹಾಗೂ ಗಾಂಧಿಗಂಜ್‌ ಠಾಣೆಯ ಅನೀಲ್‌, ನವೀನ್‌, ಇರ್ಫಾನ್‌, ಗಂಗಾಧರ, ಪ್ರವೀಣ, ಮಾರ್ಕೆಟ್‌ ಠಾಣೆಯ ಆರಿಫ್‌, ಮುತ್ತಣ್ಣ ಹಾಗೂ ಪ್ರೇಮ್‌ ಅವರಿಗೆಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅವರು ಬಹುಮಾನ ನೀಡಿ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಿದರು.

ಮಗು ಕಳ್ಳತನ ಪ್ರಕರಣದ ಸುಳಿವು

ಬೀದರ್‌ ನಗರದಲ್ಲಿ ನಡೆದ ಮಗು ಕಳ್ಳತನ ಪ್ರಕರಣ ಕುರಿತಂತೆ ಪೊಲೀಸರು ಚುರುಕಿನಿಂದ ಪತ್ತೆ ಕಾರ್ಯ ಆರಂಭಿಸಿದ್ದು ಸಧ್ಯ ಮಗುವನ್ನು ಕದ್ದೊಯ್ದ ಮಹಿಳೆಯು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು ಕನ್ನಡ ಮಾತನಾಡುವ ಆಕೆ ಕರ್ನಾಟಕದ ಮೂಲದವಳು ಎಂಬ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲಿ ಮಗುವನ್ನು ಸುರಕ್ಷಿತವಾಗಿ ಕರೆ ತರುವ ಮೂಲಕ ಮಗು ಕಳ್ಳತನ ಆರೋಪಿಗಳನ್ನು ಬಂಧಿಸುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದ್ದಾರೆ.

ಇನ್ನು ಮಗು ಕಳ್ಳರು ಎಂಬ ಗುಮಾನಿ ಮಲೆ ಯಾರ ಮೇಲೆಯೂ ಹಲ್ಲೆ ಮಾಡುವುದಾಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವದಾಗಲಿ ಮಾಡಕೂಡದು. ಅಂಥವರು ಕಂಡಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌ ಕೋರಿದ್ದಾರೆ.