ಲೋಕಸಭೆ ಜೊತೆಗೇ ಸುರಪುರ ವಿಧಾನಸಭೆ ಉಪ ಚುನಾವಣೆ

| Published : May 07 2024, 01:02 AM IST

ಸಾರಾಂಶ

ಸುರಪುರ (ಶೋರಾಪುರ) ಮತಕ್ಷೇತ್ರದ (ಪರಿಶಿಷ್ಟ ಪಂಗಡಕ್ಕೆ ಮೀಸಲು) ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್‌) ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಶಾಸಕ ಸ್ಥಾನಕ್ಕೆ ಲೋಕಸಭೆ ಚುನಾವಣೆಯ ಜೊತೆಗೇ ಮತದಾನ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ (ಶೋರಾಪುರ) ಮತಕ್ಷೇತ್ರದ (ಪರಿಶಿಷ್ಟ ಪಂಗಡಕ್ಕೆ ಮೀಸಲು) ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್‌) ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಶಾಸಕ ಸ್ಥಾನಕ್ಕೆ ಲೋಕಸಭೆ ಚುನಾವಣೆಯ ಜೊತೆಗೇ ಮತದಾನ ನಡೆಯುತ್ತಿದೆ.

ಇದೇ ಫೆ.25 ರಂದು ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ, ಲೋಕಸಭೆ ಚುನಾವಣೆ ಘೋಷಣೆಯ ವೇಳೆ ಸುರಪುರ ವಿಧಾನಸಭೆಯ ಉಪ ಚುನಾವಣೆಯನ್ನೂ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 7 ರಂದು ಲೋಕಸಭೆ ಜೊತೆ ಜೊತೆಗೇ ಸುರಪುರ ವಿಧಾನಸಭೆ ಚುನಾವಣೆಗಾಗಿನ ಮತದಾನವೂ ನಡೆಯಲಿದೆ.

ರಾಯಚೂರು ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಸುರಪುರದ ಮತದಾರ ಈ ಬಾರಿ ಎರಡು ಮತ (ಒಂದೇ ಕೋಣೆಯಲ್ಲಿ ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಿಕೊಂಡಿದ್ದು, ಮತದಾರರು ಮೊದಲು ಲೋಕಸಭೆಗೆ ಹಾಗೂ ನಂತರದಲ್ಲಿ ವಿಧಾನಸಭೆಗೆ ಮತ ಚಲಾಯಿಸಬೇಕಿದೆ) ಹಾಕಬೇಕಿದೆ. ಇದಕ್ಕೆಂದೇ ಇಲ್ಲಿನ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಸುರಪುರ ಮತಕ್ಷೇತ್ರದಲ್ಲಿ 1,42,532 ಪುರುಷರು ಹಾಗೂ 1,40,523 ಮಹಿಳೆಯರು ಹಾಗೂ 26 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,83,083 ಮತದಾರರಿದ್ದಾರೆ. 317 ಮತಗಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. 78 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಿದ್ದು, ಎಲ್ಲ 317 ಮತಗಟ್ಟೆಗಳಲ್ಲಿ "ವೆಬ್‌ ಕ್ಯಾಸ್ಟಿಂಗ್‌ " ವ್ಯವಸ್ಥೆ ಮಾಡಲಾಗಿದೆ.

ಸುರಪುರ ಮತಕ್ಷೇತ್ರದಲ್ಲಿ ಚುನಾವಣೆಗೆಂದು ಒಟ್ಟು 1586 ಸಿಬ್ಬಂದಿ ನಿಯೋಜಿಸಲಾಗಿದ್ದು, ಜೂನ್‌ 4 ರಂದು ಯಾದಗಿರಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿಧಾನಸಭೆ ಮತಕ್ಷೇತ್ರದ ಮತಗಳ ಎಣಿಕೆ ನಡೆಯಲಿದೆ. ಲೋಕಸಭೆ ಕ್ಷೇತ್ರದ ಮತಯಂತ್ರಗಳನ್ನು ರಾಯಚೂರಿಗೆ ಕಳುಹಿಸಲಾಗುವುದು. ಇದಕ್ಕೆ ಜಿಲ್ಲಾಡಳಿತ, ಚುನಾವಣಾಧಿಕಾರಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ ಸುರಪುರ ಮತಕ್ಷೇತ್ರದಲ್ಲಿದ್ದ ಒಟ್ಟು 2,75,491 ಮತದಾರರ ಪೈಕಿ, 1,58,696 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆಗ, ಲೋಕಸಭೆಗೆ ಶೇ. 57.60 ರಷ್ಟು ಮತದಾನವಾಗಿತ್ತು. ಕಳೆದ ವರ್ಷ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ವೇಳೆ ಇಲ್ಲಿನ ಒಟ್ಟು 2,75,419 ಮತದಾರರಲ್ಲಿ 2,06,992 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇ.75.16ರಷ್ಟು ಮತದಾನ ಇಲ್ಲಿ ನಡೆದಿತ್ತು.

2019 ರ ಲೋಕಸಭೆ ಚುನಾವಣೆ ವೇಳೆಯಿದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ 7,592 ಮತದಾರರು ಈಗ ಹೆಚ್ಚಿದ್ದಾರೆ. ಹಾಗೆಯೇ, 2023 ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 7,664 ಮತದಾರರು ಈಗ ಉಪ ಚುನಾವಣೆಯಲ್ಲಿ ಹೆಚ್ಚಾಗಿದ್ದಾರೆ.