ಕಾಗೇಹಳ್ಳ ಒತ್ತುವರಿ ತೆರವಿಗೆ ಕಳ್ಳ ಪೊಲೀಸ್‌ ಆಟ

| Published : May 07 2024, 01:01 AM IST

ಕಾಗೇಹಳ್ಳ ಒತ್ತುವರಿ ತೆರವಿಗೆ ಕಳ್ಳ ಪೊಲೀಸ್‌ ಆಟ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಪೊಲೀಸರು ಪೊಲೀಸ್‌ ಠಾಣೆಯ ಹಿಂಬದಿ ಕಾಗೇಹಳ್ಳ ಒತ್ತುವರಿ ಮಾಡಿಕೊಂಡಿದ್ದರಿಂದಲೇ ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲುತ್ತದೆ, ಒತ್ತುವರಿ ತೆರವುಗೊಳಿಸಬೇಕೆಂದು 9 ತಿಂಗಳ ಹಿಂದೆಯೇ ತಹಸೀಲ್ದಾರ್‌ ನೋಟೀಸ್‌ ನೀಡಿದ್ದಾರೆ ತೆರವುಗೊಳಿಸಬೇಕಾದ ಕಸಬಾ ರಾಜಸ್ವ ನಿರೀಕ್ಷಕ ಹಾಗೂ ಪೊಲೀಸರು ಕಳ್ಳ, ಪೊಲೀಸ್‌ ಆಟ ಆಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಪೊಲೀಸರು ಪೊಲೀಸ್‌ ಠಾಣೆಯ ಹಿಂಬದಿ ಕಾಗೇಹಳ್ಳ ಒತ್ತುವರಿ ಮಾಡಿಕೊಂಡಿದ್ದರಿಂದಲೇ ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲುತ್ತದೆ, ಒತ್ತುವರಿ ತೆರವುಗೊಳಿಸಬೇಕೆಂದು 9 ತಿಂಗಳ ಹಿಂದೆಯೇ ತಹಸೀಲ್ದಾರ್‌ ನೋಟೀಸ್‌ ನೀಡಿದ್ದಾರೆ ತೆರವುಗೊಳಿಸಬೇಕಾದ ಕಸಬಾ ರಾಜಸ್ವ ನಿರೀಕ್ಷಕ ಹಾಗೂ ಪೊಲೀಸರು ಕಳ್ಳ, ಪೊಲೀಸ್‌ ಆಟ ಆಡುತ್ತಿದ್ದಾರೆ.

ಪಟ್ಟಣದ ಮಡಹಳ್ಳಿ ರಸ್ತೆಯಲ್ಲಿರುವ ಪೊಲೀಸ್‌ ಠಾಣೆಯ ಹಿಂಬದಿ ಪೊಲೀಸರೇ ಕಾಗೇ ಹಳ್ಳವನ್ನು ಒತ್ತವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಸಬಾ ರಾಜಸ್ವ ನಿರೀಕ್ಷಕರಿಗೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು 2023 ಸೆ. 16 ರಂದು ನೋಟೀಸ್‌ ಕೂಡ ನೀಡಿದ್ದಾರೆ.

ಆರ್‌ಐ ಕೂಡ ವಿಫಲ:

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕಾಗೇಹಳ್ಳ ಒತ್ತುವರಿ ತೆರವು ಗೊಳಿಸಿ ವರದಿ ಮಾಡುವಂತೆ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಆದೇಶ ಹೊರಡಿಸಿದ್ದರೂ ರಾಜಸ್ವ ನಿರೀಕ್ಷಕರು ಕೂಡ ಒತ್ತುವರಿ ತೆರವುಗೊಳಿಸಲು ವಿಫಲರಾಗಿದ್ದಾರೆ.

ಮೀನಾ ಮೇಷ ಏಕೆ?: ಗುಂಡ್ಲುಪೇಟೆ ಪೊಲೀಸ್‌ ಠಾಣೆಯ ಹಿಂಬದಿಯ ಕಾಗೇ ಹಳ್ಳ ಒತ್ತುವರಿ ಮಾಡಿಕೊಂಡಿರುವ ಪೊಲೀಸರು ಒತ್ತುವರಿ ತೆರವು ಗೊಳಿಸಲು ಕಂದಾಯ ಇಲಾಖೆಗೆ ಸಹಕಾರ ನೀಡುತ್ತಿಲ್ಲ ಎನ್ನಲಾಗಿದೆ.

ಶಾಸಕರೂ ಹೇಳಿದ್ದಾರೆ: ಕಾಗೇಹಳ್ಳದ ಒತ್ತುವರಿ ತೆರವುಗೊಳಿಸಿದರೆ ಮಳೆಯ ನೀರು ನೇರವಾಗಿ ಕಾಗೇಹಳ್ಳದಲ್ಲಿ ಹೋದರೆ ಮಡಹಳ್ಳಿ ಸರ್ಕಲ್‌ ನಲ್ಲಿ ನಿಲ್ಲವುದಿಲ್ಲ, ಹಾಗಾಗಿ ಒತ್ತುವರಿ ತೆರವುಗೊಳಿಸಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದರು. ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಪೊಲೀಸರಿಗೆ ಕಾಗೇಹಳ್ಳದ ಒತ್ತುವರಿ ತೆರವುಗೊಳಿಸಿ ಎಂದು ಹಲವು ಬಾರಿ ಮೌಖಿಕವಾಗಿ ಹೇಳಿದ್ದಾರೆ ಆದರೂ ಪೊಲೀಸರು ಒತ್ತುವರಿ ಮಾಡಿಕೊಂಡ ಜಾಗ ಬಿಡದಿರಲು ಕಾರಣವೇನು ಎಂಬುದು ಸದ್ಯದ ಪ್ರಶ್ನೆ.

ಜಾಣ ಮೌನ:

ಗುಂಡ್ಲುಪೇಟೆ ಪೊಲೀಸರೇ ಕಾಗೇಹಳ್ಳ ಒತ್ತುವರಿ ಮಾಡಿಕೊಂಡಿರುವ ಜಾಗ ಬಿಡಿ ಎಂದು ತಹಸೀಲ್ದಾರ್‌ ಸೂಚನೆ ನೀಡಿದ್ದರೂ ಪೊಲೀಸರು ಒತ್ತುವರಿ ತೆರವು ವಿಚಾರದಲ್ಲಿ ಜಾಣ ಮೌನ ವಹಿಸಿದ್ದಾರೆ.

ನೀರು ನಿಂತ್ರೆ ಖುಷಿನಾ: ಮಡಹಳ್ಳಿ ಸರ್ಕಲ್‌ ನಲ್ಲಿ ಮಳೆ ಬಂದ ಸಮಯದಲ್ಲಿ ಮಳೆಯ ನೀರು ನಿಂತು ಚಿಕ್ಕ ಕೆರೆಯಂತಾಗುತ್ತದೆ.ಮಳೆ ನೀರು ನಿಂತಾಗ ಬೈಕ್‌, ಸೈಕಲ್‌, ಪಾದಚಾರಿಗಳು ಹಾಗೂ ಆಟೋಗಳು ನೀರಿನಲ್ಲಿ ಸಂಚರಿಸುವುದು ಪೊಲೀಸರಿಗೆ ಖುಷಿ ವಿಚಾರನಾ ಎಂದು ಬೈಕ್‌ ಸವಾರರು ಪ್ರಶ್ನಿಸಿದ್ದಾರೆ.