₹300 ಕೋಟಿ ವ್ಯವಹಾರದ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಬೇಕು: ಡಾ.ಎಚ್.ಎಸ್.ಧರ್ಮರಾಜ್

| Published : May 07 2024, 01:05 AM IST

₹300 ಕೋಟಿ ವ್ಯವಹಾರದ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಬೇಕು: ಡಾ.ಎಚ್.ಎಸ್.ಧರ್ಮರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ವಾರ್ಷಿಕ ೩೦೦ ಕೋಟಿ ರು. ವಹಿವಾಟು ನಡೆಸುತ್ತಿರುವ ಹೊಂಕರವಳ್ಳಿ ಗ್ರಾಮಕ್ಕೆ ಬ್ಯಾಂಕ್ ಸೌಲಭ್ಯ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಯನ್ನು ಸರ್ಕಾರ ಕಲ್ಪಿಸಬೇಕೆಂದು ಪ್ರಗತಿ ಕೃಷಿಕ ಡಾ.ಎಚ್.ಎಸ್.ಧರ್ಮರಾಜ್ ಆಗ್ರಹಿಸಿದರು. ಹಾಸನದ ಆಕಾಶವಾಣಿಯ ಹಳ್ಳಿ ಧ್ವನಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

ಹಳ್ಳಿ ಧ್ವನಿ ಕಾರ್ಯಕ್ರಮ । ಹಾಸನ ಆಕಾಶವಾಣಿಗೆ 33ರ ಸಂಭ್ರಮ । ಪರಿಸರ ಪ್ರಿಯ ಸಭೆ

ಕನ್ನಡಪ್ರಭ ವಾರ್ತೆ ಆಲೂರು

ವಾರ್ಷಿಕ ೩೦೦ ಕೋಟಿ ರು. ವಹಿವಾಟು ನಡೆಸುತ್ತಿರುವ ಹೊಂಕರವಳ್ಳಿ ಗ್ರಾಮಕ್ಕೆ ಬ್ಯಾಂಕ್ ಸೌಲಭ್ಯ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಯನ್ನು ಸರ್ಕಾರ ಕಲ್ಪಿಸಬೇಕೆಂದು ಪ್ರಗತಿ ಕೃಷಿಕ ಡಾ.ಎಚ್.ಎಸ್.ಧರ್ಮರಾಜ್ ಆಗ್ರಹಿಸಿದರು.

ಹಾಸನ ಆಕಾಶವಾಣಿ ಶನಿವಾರ ತಾಲೂಕಿನ ಹೊಂಕರವಳ್ಳಿ ಮತ್ತು ಸಕಲೇಶಪುರ ತಾಲೂಕಿನ ಕುಣಿಗನಹಳ್ಳಿ ಗ್ರಾಮದಲ್ಲಿ ತನ್ನ ೩೩ನೇ ವಾರ್ಷಿಕೋತ್ಸವ ಹಿನ್ನೆಲೆ ಹಳ್ಳಿ-ಧ್ವನಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ, ಪರಿಸರ ಪ್ರಿಯ ಸಭೆ ಮತ್ತು ಸೇವಾ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘ಹೊಂಕರವಳ್ಳಿ ಗ್ರಾಮದಲ್ಲಿ ವಾರ್ಷಿಕ ಸುಮಾರು ೪೦೦ ಕೋಟಿ ರು.ಗಿಂತ ಅಧಿಕವಾಗಿ ವಹಿವಾಟು ನಡೆಯುತ್ತದೆ. ಸಣ್ಣಪುಟ್ಟ ಕೃಷಿಕರು ನರ್ಸರಿ ಕೃಷಿ ಮಾಡುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಯುವ ಗ್ರಾಮ ಮತ್ತೊಂದಿಲ್ಲ. ಆದರೆ ವಹಿವಾಟಿಗಾಗಿ ಬ್ಯಾಂಕ್‌ನ್ನು ಅರಸಿ ೭ ಕಿ.ಮೀ. ದೂರದ ಬಾಳ್ಳುಪೇಟೆಗೆ ಹೋಗಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಯಾವುದೇ ಹಳ್ಳಿಗೆ ಹೋದರೂ ವಯಸ್ಸು ೫೦ ಮೀರಿದವರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಯುವಜನರು ಕೃಷಿಯಲ್ಲಿ ಆಸಕ್ತಿ ಮೂಡಿಸದಿದ್ದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂಬ ಉದ್ದೇಶದಿಂದ ವಾರ್ಷಿಕವಾಗಿ ಸುಮಾರು ೧೫೦ ಯುವಕರಿಗೆ ಕೃಷಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳು ಎಚ್ಚರಿಕೆಯಾದರೂ ಅದು, ಪರಿಸರದ ಇತರ ಒಳಿತುಗಳಿಗೆ ಕಾರಣವಾಗಿರುತ್ತದೆ. ಯುವಜನರು ಅತಿ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮಸ್ಥರಾದ ಎಸ್.ಜಗದೀಶ್ ಮಾತನಾಡಿ, ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ಸುಮಾರು ೫೫೦೦ ಜನಸಂಖ್ಯೆ ಮತ್ತು ೪೫೫೨ ಹೆಕ್ಟೇರ್ ಕೃಷಿ ಪ್ರದೇಶವನ್ನು ಹೊಂದಿದೆ. ಇಲ್ಲಿ ವೈವಿಧ್ಯಮಯ ಅರಣ್ಯ ಪ್ರದೇಶವಿರುವುದರಿಂದ ಕಾಡಾನೆಗಳು ಸೇರಿದಂತೆ ಹಲವು ಬಗೆಯ ಪ್ರಾಣಿ ಸಂಕುಲವಿದೆ. ಸಣ್ಣಪುಟ್ಟ ಕುಟುಂಬಗಳು ಕಾಫಿ, ಮೆಣಸು ನರ್ಸರಿ ಮಾಡುತ್ತಾರೆ. ಬರ ಎದುರಾದರೂ ಕುಡಿಯಲು ನೀರಿಗೆ ಈವರೆಗೂ ತೊಂದರೆಯಿಲ್ಲ. ಹೊಂಕರವಳ್ಳಿ ಗ್ರಾಮದಲ್ಲಿ ಅಗತ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ತೆರೆಯಬೇಕು. ಇದರಿಂದ ಜನ ಮತ್ತು ಜಾನುವಾರುಗಳ ಆರೋಗ್ಯಕ್ಕೆ ಅನುಕೂಲವಾಗಲಿದೆ ಎಂದರು.

ಮಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ, ಉನ್ನತ ವಿದ್ಯಾಭ್ಯಾಸದವರೆಗೂ ವಿದ್ಯಾರ್ಥಿ ವೇತನ ನೀಡಲಾಗುವುದು. ಈವರೆಗೆ ೧೧.೮೪ ಲಕ್ಷ ರು. ವೇತನವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಖಾ ವ್ಯವಸ್ಥಾಪಕ ಆರ್.ಕೆ.ದಯಾನಂದ್ ಮನವಿ ಮಾಡಿದರು.

ಆಕಾಶವಾಣಿ ಮುಖ್ಯಸ್ಥರಾದ ಡಾ. ವಿಜಯ ಅಂಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಜಗದೀಶ್, ಸದಸ್ಯ ಇಬ್ರಾಹಿಂ, ಅಡಗೂರು ಚೇತನ್ ಗುರೂಜಿ, ಜೀವನಿಧಿ ರಕ್ತನಿಧಿ ಪೌಂಡೇಶನ್ ಮುಖ್ಯಸ್ಥ ಜಿ. ಎಸ್.ಮೋಹನ್, ಗ್ರಾಮಸ್ಥರಾದ ರುದ್ರಪ್ಪ, ಜಗದೀಶ್‌ಗೌಡ, ಸಂಕಪ್ಪ, ರಂಗಶೆಟ್ಟಿ, ಗಿಡ್ಡೇಗೌಡ, ಉದ್ಘೋಶಕರಾದ ಮಧುಸೂಧನ್, ಲೀಲಾವತಿ, ಎಚ್.ಎಸ್.ಚಂದ್ರಮ್ಮ, ಎನ್.ಎಂ.ಚಂದ್ರಶೇಖರ್, ಗಿಡ್ಡೇಗೌಡ, ತಾರಾನಾಥ್, ಎಚ್.ಪಿ.ಪುಟ್ಟರಾಜು ಇದ್ದರು.

ಆಲೂರಿನ ಆಕಾಶವಾಣಿಯ ಪರಿಸರ ಪ್ರಿಯ ಸಭೆ ಮತ್ತು ಸೇವಾ ಸ್ಮರಣೆ ಕಾರ್ಯಕ್ರಮದಲ್ಲಿ ಕೃಷಿಕರಾದ ಡಾ.ಎಚ್.ಎಸ್.ಧರ್ಮರಾಜ್, ಕೆ. ಎನ್. ಹರೀಶ್, ಎಚ್.ಆರ್.ಜಗದೀಶ್, ಕೆ.ಎ.ಇಬ್ರಾಹಿಂ ರವರನ್ನು ಸನ್ಮಾನಿಸಲಾಯಿತು.