ಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭ

| Published : Apr 06 2024, 12:48 AM IST

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಹಬ್ಬದ ಜಾತ್ರೆ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಹಬ್ಬದ ಜಾತ್ರೆ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದೆ.

ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಬೇಡಗಂಪಣ ಸರದಿ ಅರ್ಚಕರಿಂದ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲು ಸಕಲ ಸಿದ್ಧತೆ ಕ್ರಮ ಕೈಗೊಂಡಿದೆ.

ಜಾತ್ರೆ ವಿಶೇಷತೆಗಳು: ಏ.6ರ ಶನಿವಾರ ಯುಗಾದಿ ಹಬ್ಬದ ಜಾತ್ರೆ ಪ್ರಾರಂಭವಾಗಲಿದೆ. ಏ.7ರಂದು ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ಮಹಾಮಂಗಳಾರತಿ ವಿಶೇಷ ಸೇವೆ ಉತ್ಸವ ಜರುಗಲಿವೆ. ಏ.8ರ ಸೋಮವಾರ ಅಮಾವಾಸ್ಯೆ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಸೇವೆ ಉತ್ಸವಾದಿಗಳು ಜರುಗಲಿವೆ. ಏ.9ರ ಮಂಗಳವಾರ ಚಂದ್ರಮಾನ ಯುಗಾದಿ ರಥೋತ್ಸವ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆ 7.30 ರಿಂದ 9 ರವರೆಗೆ ನಡೆಯಲಿದೆ.

ಸಕಲ ಸಿದ್ಧತೆ: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಯಾವುದೇ ಲೋಪ ದೋಷಗಳು ಬರದಂತೆ ಸಕಲ ಸಿದ್ಧತೆಯೊಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ, ಭಕ್ತರು ಮಾದೇಶ್ವರನ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಹೋಗುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ರಸ್ತೆಗಳಿಗೆ ಟ್ಯಾಂಕರ್‌ಗಳಿಂದ 2 ಗಂಟೆಗೊಮ್ಮೆ ನೀರು ಹಾಕುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ರಾಜರು ನೀಡಿದ ರಥಕ್ಕೆ 89 ವರ್ಷ ಇತಿಹಾಸ: 1935ರ ಏ.4ರಂದು ಮಲೆ ಮಾದೇಶ್ವರ ಬೆಟ್ಟಕ್ಕೆ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಯುಗಾದಿ ಹಬ್ಬದ ಮೊದಲ ದೊಡ್ಡ ಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು. ಇದೀಗ ರಥಕ್ಕೆ ಬರೋಬ್ಬರಿ 89 ವರ್ಷ ಇತಿಹಾಸವಿದೆ. ಅಂದಿನ ಕಾಲದ ದೇವಸ್ಥಾನದ ಆಡಳಿತ ಕಮಿಟಿ ಮೆಂಬರ್ ರಾವ್ ಸಾಹೇಬ್ ಹಾಗೂ ಕೊಳ್ಳೇಗಾಲ ಜಿ.ಪಿ. ಮಲ್ಲಪ್ಪ, ಶ್ರೀ ಕ್ಷೇತ್ರದ ಸಾಲೂರು ಮಠದ ವೇದಮೂರ್ತಿ ಶಾಂತಲಿಂಗ ಸ್ವಾಮಿಗಳು ಮತ್ತು ಪುಟ್ಟಮಾದ ತಂಬಡಯ್ಯ, ಒಮಾದ ತಂಬಡಯ್ಯ ಹಾಗೂ ಮೈಸೂರು ಅರಮನೆ ಕಾಂಟ್ರಾಕ್ಟರ್ ಮೇಸ್ತ್ರಿ ತಿಮ್ಮಯ್ಯಚಾರ್ಯರ ಪುತ್ರ ಅಪ್ಪಾಜಚಾರ್ಯರಿಂದ ರಥ ತಯಾರಿಸಲ್ಪಟ್ಟಿದೆ ಎಂಬುದನ್ನು ನಮೂದಿಸಲಾಗಿದೆ. ಧಾರ್ಮಿಕ ಕ್ಷೇತ್ರದ ಇತಿಹಾಸ ಪ್ರಸಿದ್ಧಿ ಪಡೆದಿರುವ ಮಲೆ ಮಾದೇಶ್ವರ ಬೆಟ್ಟದ ರಥಕ್ಕೂ ಹಾಗೂ ಮೈಸೂರು ರಾಜ ಮನೆತನಕ್ಕೂ ಐತಿಹಾಸಿಕ ಧಾರ್ಮಿಕ ಸಂಬಂಧ ಇರುವ ಬರಹಗಳು ರಥದ ಮೇಲೆ ಇದೆ.ಯುಗಾದಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಶುದ್ಧ ಮಡಿಕೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಎರಡು ತುರ್ತು ವಾಹನ ವ್ಯವಸ್ಥೆ, ವಿಶೇಷ ದಾಸೋಹ ವ್ಯವಸ್ಥೆ, ಬಿಸಿಲು ಹೆಚ್ಚಾಗಿರುವ ಹಿನ್ನೆಲೆ ಬರುವ ಭಕ್ತಾದಿಗಳಿಗೆ ಮೊಸರನ್ನ, ಮಜ್ಜಿಗೆ ಹಾಗೂ ವಿಶೇಷವಾಗಿ ಈ ಬಾರಿ ನಿರಂತರ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದ ಹಾಗೂ ತಮಿಳುನಾಡಿನಿಂದ ಭಕ್ತಾದಿಗಳು ಹೆಚ್ಚಾಗಿ ಬರುವುದರಿಂದ ಸಾರಿಗೆ ವ್ಯವಸ್ಥೆ, ನೆರಳಿನ ವ್ಯವಸ್ಥೆ ಸಕಲ ರೀತಿಯಲ್ಲೂ ಭಕ್ತಾದಿಗಳಿಗೆ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

-ರಘು, ಕಾರ್ಯದರ್ಶಿ, ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ