ಅವೈಜ್ಞಾನಿಕ ಡಿವೈಡರ್ ತನಿಖೆ ಮುಗಿದ ಅಧ್ಯಾಯ!

| Published : May 06 2024, 12:32 AM IST

ಸಾರಾಂಶ

ಸದ್ದಿಲ್ಲದೇ ನಡೆದಿದೆ ತಿಪ್ಪೆ ಸಾರಿಸುವ ಕೆಲಸ ಬಚಾವ್ ಆಗಲು ಅಧಿಕಾರಿಗಳ ಕಾರ್ಯತಂತ್ರ । ಒನೇ ವೇನಲ್ಲಿ ಡಿವೈಡರ್ ನಿರ್ಮಾಣ ಮಾಡಿಯೇ ಇಲ್ಲವಂತೆ

ಕನ್ನಡಪ್ರಭವಾರ್ತ, ಚಿತ್ರದುರ್ಗ

ಚಿತ್ರದುರ್ಗ ನಗರದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ ನ ತನಿಖೆಯ ಕಾರ್ಯ ಹೆಚ್ಚು ಕಡಿಮೆ ನಿರ್ಣಾಯಕ ಹಂತ ತಲುಪಿದ್ದು ಅಧಿಕಾರಿಗಳು ಏನೂ ಆಗಿಲ್ಲವೆಂಬಂತೆ ತಿಪ್ಪೇ ಸಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕೆಲವು ಕಡೆ ಗುತ್ತಿಗೆದಾರರು ಬಂದಷ್ಟೇ ಬರಲಿ ಎಂಬ ತೀರ್ಮಾನಕ್ಕೆ ಬಂದಿದ್ದರೆ, ಹೇಗಾದರೂ ಮಾಡಿ ಈ ತಲೆನೋವು ಬಗೆ ಹರಿದರೆ ಸಾಕೆಂಬ ಅಭಿಪ್ರಾಯ ಅಧಿಕಾರಿಗಳದ್ದು.

ಚಿತ್ರದುರ್ಗ ನಗರದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್‌ಗಳು ವಿಧಾನಸಭೆ ಅಧಿವೇಶನದಲ್ಲಿ ಸದ್ದು ಮಾಡಿದ ನಂತರ ಬೆಂಗಳೂರಿನಿಂದ ಆಗಮಿಸಿದ ವಿಚಕ್ಷಣ ದಳದ ತಂಡ ಎಲ್ಲೆಲ್ಲಿ ಡಿವೈಡರ್ ಗಳ ತೆರವುಗೊಳಿಸಬೇಕೆಂಬ ಸಣ್ಣದೊಂದು ಸೂಚನೆ ನೀಡಿ ನಿರ್ಗಮಿಸಿದ್ದರು. ತರುವಾಯ ಶಾಸಕ ವೀರೇಂದ್ರ ಪಪ್ಪಿ ಖುದ್ದು ಆಸಕ್ತಿ ವಹಿಸಿ ಕಳೆದ ಫೆಬ್ರವರಿ 9 ರಂದು ಚಿತ್ರದುರ್ಗ ನಗರದ ಆರು ಕಡೆ ಡಿವೈಡರ್ ಗಳ ಓಪನ್ ಮಾಡಿಸಿದ್ದರು. ಗಾಂಧಿ ವೃತ್ತದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗಿನ ಒನ್ ವೇ ಡಿವೈಡರನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು. ಡಿವೈಡರ್ ಗಳಲ್ಲಿ ಓಪನ್ ಕೊಡುವ ವಿಚಾರದಲ್ಲಿ ಅವೈಜ್ಞಾನಿಕ ನಿಯಮ ಅಳವಡಿಸಲಾಗಿತ್ತು.

ಡಿಎಆರ್ ಕಚೇರಿ ಮುಂಭಾಗ, ಸಾಯಿಬಾಬ ದೇವಸ್ಥಾನದ ಬಳಿ, ಅರಣ್ಯ ಇಲಾಖೆ ಸಮೀಪ ಹತ್ತಾರು ಮೀಟರ್ ಡಿವೈಡರ್ ತೆರವು ಗೊಳಿಸಿ ಸಾರ್ವಜನಿಕರ ಆಕ್ರೋಶ ತಣಿಸುವ ಕೆಲಸ ಮಾಡಲಾಗಿತ್ತು. ಆರ್ ಟಿಓ ಬಳಿ ಕೊಡಲಾದ ಓಪನ್ ಕೂಡಾ ಅಪಹಾಸ್ಯಕ್ಕೆ ಒಳಗಾಗಿತ್ತು. ಓಪನ್ ಕೊಡದೆ ಇಡೀ ಡಿವೈಡರ್ ತೆರವುಗೊಳಿಸಿದ್ದರೆ ಸುಗಮ ಸಂಚಾರಕ್ಕೆ ಅರ್ಥ ಬರುತ್ತಿತ್ತು.

ಡಿವೈಡರ್ ನಿರ್ಮಾಣದ ಗುತ್ತಿಗೆ ಕಾಮಗಾರಿ ಹೆಚ್ಚು ದಿನಗಳ ಕಾಲ ಮುಂದಿಟ್ಟುಕೊಳ್ಳುವಂತಿಲ್ಲ. ಆದಷ್ಟು ಬೇಗ ಬಿಲ್ ಪಡೆದುಕೊಳ್ಳಬೇಕಾಗಿದೆ. ಸಿಕ್ಕಷ್ಟೇ ಸಿಗಲಿ ಎಂಬ ಮನೋಭಾವ ಗುತ್ತಿಗೆದಾರರಿಗಿದೆ. ಕೈ ತೊಳೆದುಕೊಳ್ಳುವ ಇಂಗಿತ ಅಧಿಕಾರಿಗಳದ್ದು. ಹಾಗಾಗಿ ಕೆಲವು ಕಡೆ ಡಿವೈಡರ್ ನಿರ್ಮಾಣ ಮಾಡಿಯೇ ಇಲ್ಲವೆಂಬ ಷರಾ ಬರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒನ್ ವೇ ನಲ್ಲಿ ಹಾಕಿದ ಡಿವೈಡರ್ ಶಾಸಕರೇ ಖುದ್ದಿ ನಿಂತಿದ್ದು ನೆಲಸಮ ಮಾಡಿಸಿದ್ದರು. ಗುತ್ತಿಗೆದಾರರು ಈ ನಷ್ಟವನ್ನು ಪೂರ್ಣ ಮೈ ಮೇಲೆ ಹಾಕಿಕೊಂಡು ಅಲ್ಲಿ ಡಿವೈಡರ್ ನಿರ್ಮಾಣ ಮಾಡಿಯೇ ಇಲ್ಲವೆಂಬ ವಾದ ಮಂಡಿಸುತ್ತಿದ್ದಾರೆ.

ಡಿವೈಡರ್ ನಿರ್ಮಾಣಕ್ಕೆ ಎಸ್ಟಿಮೇಷನ್ ಅಧಿಕಾರಿಗಳು ಹೇಗೆ ಮಾಡಿದ್ದರು, ಅದಕ್ಕೆ ಒಪ್ಪಿಗೆ ಸೂಚಿಸಿದವರಾರು, ಡಿವೈಡರ್ ಕಟ್ಟಿ ನೆಲಸಮದಿಂದ ಆದ ನಷ್ಟವ ಭರಿಸುವರು ಯಾರು, ಹಾಗೊಂದು ವೇಳೆ ಗುತ್ತಿಗೆದಾರರು ನಷ್ಟ ಭರಿಸಿಕೊಂಡರೆ ಟೆಂಡರ್‌ನಲ್ಲಿ ಎಷ್ಟು ಹಣ ಕಡಿತ ಮಾಡಲಾಗುತ್ತದೆ. ಇದುವರೆಗೂ ನಾಗರಿಕರಿಗೆ ಆದ ತೊಂದರೆಗಳಿಗೆ ಯಾರು ಜವಾಬ್ದಾರಿ ಎಂಬಿತ್ಯಾದಿ ಪ್ರಶ್ನೆಗಳು ಧುತ್ತನೆ ಎದುರಾಗಿವೆ. ಇವಾವೂ ಕೂಡಾ ಅಧಿಕಾರಿಗಳ ಕಿವಿಯಲ್ಲಿ ಹೋಗುತ್ತಿಲ್ಲ. ತಲೆನೋವು ನಿವಾರಣೆಗೆ ಯಾವ ಮಾತ್ರ ನುಂಗಬೇಕೆಂಬ ಲೆಕ್ಕಾಚಾರದಲ್ಲಿ ಇದ್ದಾರೆ. ತಿಪ್ಪೇ ಸಾರಿಸುವ ಕೆಲಸ ಅನಿವಾರ್ಯವಾಗಿದೆ.

ಎಡವಿದ ಜಿಲ್ಲಾಡಳಿತ: ಕೆಲವು ಕಡೆ ರಸ್ತೆ ಹಾಗೂ ಡಿವೈಡರ್ ನಿರ್ಮಾಣಕ್ಕೆ ಖನಿಜ ನಿಧಿ(ಡಿಎಂಎಫ್ ಫಂಡ್ ) ಬಳಸಿಕೊಳ್ಳಲಾಗಿದೆ. ಗಣಿ ಬಾಧಿತ ಪ್ರದೇಶ ಅಭಿವೃದ್ದಿ ನಿಧಿಯಲ್ಲಿ ಈ ರೀತಿ ಬೇಕಾಬಿಟ್ಟಿಯಾಗಿ ರಸ್ತೆ ಮಾಡುವಂತಿಲ್ಲ. ಇಂತಿಷ್ಟೇ ಮೊತ್ತವ ವಿನಿಯೋಗ ಮಾಡಬೇಕೆಂದಿದೆ. ಕಾಮಗಾರಿಗೆ ಅನುಮೋದನೆ ನೀಡುವಾಗ ಜಿಲ್ಲಾಡಳಿತ ಎಡವಿದೆ. ಪೂರ್ವಾಪರ ಆಲೋಚಿಸಲು ಹೋಗಿಲ್ಲ. ಅನುದಾನ ಸಿಕ್ಕಿತು ಎಂಬ ಕಾರಣಕ್ಕೆ ರಸ್ತೆಗೆ ತಂದು ಸುರಿಯಲಾಗಿದೆ.

ಏತನ್ಮಧ್ಯೆ ಡಿವೈಡರ್ ಮಧ್ಯೆ ಅಲಂಕಾರಿಕ ಗಿಡಗಳ ಬೆಳೆಸಲು ನಗರಸಭೆ ವತಿಯಿಂದ 1.90 ಕೋಟಿ ರುಪಾಯಿ ಅನುದಾನ ಕಾಯ್ದಿರಿಸಲಾಗಿತ್ತು. ಅಲಂಕಾರಿಕ ಗಿಡ ನೆಟ್ಟ ಗುತ್ತಿಗೆದಾರ ಹಣ ಪಾವತಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ. 40 ಡಿಗ್ರಿ ಉರಿ ಬಿಸಿಲ ಬೇಗೆಯಲ್ಲಿ ಎಲ್ಲಿಯೂ ಗಿಡಗಳು ಕಾಣಿಸುತ್ತಿಲ್ಲ. ನಿರ್ವಹಣೆ ಕೂಡಾ ಮಾಡಲಾಗಿಲ್ಲ. ಗುತ್ತಿಗೆದಾರ ಹೈಕೋರ್ಟ್ ಮೊರೆ ಹೋಗಿರುವದರಿಂದ ಅಲ್ಲಿಂದ ಏನು ತೀರ್ಪು ಬರುತ್ತದೋ ಎಂಬ ನಿರೀಕ್ಷೆಯಲ್ಲಿದೆ ನಗರಸಭೆ.