ರಾಜಕೀಯ ಲಾಭಕ್ಕಾಗಿ ಕೋಟನೂರು ಘಟನೆ ಬಳಕೆ: ಸಚಿವ ಶರಣಪ್ರಕಾಶ ಪಾಟೀಲ್‌

| Published : May 06 2024, 12:32 AM IST

ರಾಜಕೀಯ ಲಾಭಕ್ಕಾಗಿ ಕೋಟನೂರು ಘಟನೆ ಬಳಕೆ: ಸಚಿವ ಶರಣಪ್ರಕಾಶ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರಾಗಿ ಉಮೇಶ್ ಜಾಧವ್ ಅವರ ಸಾಧನೆ ಶೂನ್ಯವಾಗಿದೆ. ಹಾಗಾಗಿ, ಕೋಟನೂರು ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ನಾಯಕರು ಹಾಗೂ ಜಾಧವ್ ಪ್ರಯತ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೋಟನೂರು ಘಟನೆಯನ್ನು ಕಾಂಗ್ರೆಸ್ ಖಂಡಿಸಿದೆ. ಸಂತ್ರಸ್ತರನ್ನು ನಾವು ಭೇಟಿ ಮಾಡಿ ಮಾತನಾಡಿಸಿ ಅವರಿಗೆ ಅಗತ್ಯವಿರುವ ಭದ್ರತೆ ನೀಡುತ್ತೇವೆ ಎಂದು ಹೇಳಿದ್ದೇವೆ. ಕುಟುಂಬದವರ ಬೇಡಿಕೆಯಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಆದರೂ ಕೂಡಾ ಬಿಜೆಪಿ ಈ ಪ್ರಕರಣವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ ಆರೋಪಿಸಿದರು.

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಸಂಸದರಾಗಿ ಉಮೇಶ್ ಜಾಧವ್ ಅವರ ಸಾಧನೆ ಶೂನ್ಯವಾಗಿದೆ. ಹಾಗಾಗಿ, ಕೋಟನೂರು ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ನಾಯಕರು ಹಾಗೂ ಜಾಧವ್ ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾದ ಕುಟುಂಬ ವರ್ಗದವರನ್ನು ಅಪ್ಪುಗೌಡ, ಚಂದು ಪಾಟೀಲ್ ಹಾಗೂ‌ ಜಾಧವ್ ಭೇಟಿ ಮಾಡಿದ್ದಾರೆಯೆ? ಎಂದು ಪಾಟೀಲ್ ಕೇಳಿದರು.

ಕಳೆದ ಐವತ್ತು ವರ್ಷದಿಂದ ಮಲ್ಲಿಕಾರ್ಜುನ‌ ಖರ್ಗೆ ಅವರು ರಾಜಕೀಯದಲ್ಲಿದ್ದಾರೆ. ಜೊತೆಗೆ ಪ್ರಿಯಾಂಕ್ ಹಾಗೂ ರಾಧಾಕೃಷ್ಣ ದೊಡ್ಡಮನಿ ಅವರು ಕೂಡಾ ರಾಜಕೀಯದಲ್ಲಿದ್ದಾರೆ. ಅವರು ಯಾರ ಮೇಲೆಯೂ ಅಟ್ರಾಸಿಟಿ ಕೇಸ್‌ ದಾಖಲಿಸಿಲ್ಲ ಹಾಗೂ ಅಂತಹ ಯಾವುದೇ ಪ್ರಯತ್ನಗಳಿಗೆ ಬೇರೆಯರಿಗೆ ಆಸ್ಪದ ಕೂಡ‌ ನೀಡಿಲ್ಲ. ಈಗ‌ ಚುನಾವಣೆ ಬಂದಿದೆ ಎಂದು ಬಿಜೆಪಿ ಪ್ರಕರಣಗಳನ್ನು ರಾಜಕೀಯಕ್ಕೆ‌ ಬಳಸಿಕೊಳ್ಳುತ್ತಿದೆ ಎಂದು‌ ಪುನರುಚ್ಚರಿಸಿದರು.

ಕಾಂಗ್ರೆಸ್ ಪಕ್ಷ ವೀರಶೈವ ಲಿಂಗಾಯತ ಸಮಾಜಕ್ಕೆ ಕೊಡುಗೆ ನೀಡಿದೆ. ಬಿ.ಆರ್. ಪಾಟೀಲ, ಎಂವೈ ಪಾಟೀಲರಿಗೆ ಹಾಗೂ ನನಗೆ ಟಿಕೆಟ್‌ ನೀಡಿ ಶಾಸಕರು ಹಾಗೂ ಸಚಿವರನ್ನಾಗಿ ಮಾಡಿದೆ, ಬಿಜೆಪಿಯವರು ಏನು ಮಾಡಿದ್ದಾರೆ? ಅವರ‌ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಲಿಂಗಾಯತರಿಗೆ ಸಚಿವರನ್ನಾಗಿ ಮಾಡಲಿಲ್ಲ ಎಂದರು.

ಖರ್ಗೆ ಕುಟುಂಬ ಬಸವ ತತ್ವದಲ್ಲಿ ನಂಬಿಕೆ ಇಟ್ಟಿದೆ: ಖರ್ಗೆ ಕುಟುಂಬ ಬಸವ ತತ್ವಗಳಲ್ಲಿ ಅಪಾರ ನಂಬಿಕೆ ಹೊಂದಿದೆ. ನಮ್ಮ ರಾಜಕೀಯ ಜೀವನದಲ್ಲಿ ಅಟ್ರಾಸಿಟಿ‌ ಕೇಸ್‌ ದಾಖಲಿಸಲು ಯಾರಿಗೂ ಪ್ರಚೋದನೆ ನೀಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ವಚನ‌ ಸಂಗ್ರಹಾಲಯ ಸ್ಥಾಪನೆ ಮಾಡುವ ಗುರಿ ಹೊಂದಿದ್ದು ಬಸವಣ್ಣ ಹಾಗೂ ಇತರೆ ಶರಣರ ಬಗ್ಗೆ ಅಧ್ಯಯನ ಮಾಡಲು ಇದರಿಂದ ಅನುಕೂಲವಾಗಲಿದೆ ಈಗಾಗಲೇ ಯೋಜನೆಗೆ ರು. 5 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.

ಖರ್ಗೆಯವರ 51 ನೇ ವರ್ಷದ ಸಾರ್ವದನಿಕ ಬದುಕು, ತಮ್ಮ 20 ನೇ ವರ್ಷದ ಸಾರ್ವಜನಿಕ ಬದುಕಲ್ಲಿ ಒಮ್ಮೆಯೂ ಅಟ್ರಾಸಿಟಿ, ಸುಳ್ಳು ನಿಂದನೆ ಕೇಸ್‌ಗಳಿಗೆ ಪ್ರಚೋದನೆ ನೀಡಿಲ್ಲ. ಕಲಬುರಗಿ ನಗರದಲ್ಲಿ ಶಾಂತಿ ಭಂಗ ಮಾಡಲು ಬಿಡುವುದಿಲ್ಲ. ಬಿಜೆಪಿ ಯವರು ಟೂಲ್ ಕಿಟ್ ಮಾಡಿಕೊಂಡಿದ್ದಾರೆ. ಬಿಹಾರ, ಯುಪಿಗಳಲ್ಲಿ ಇರುವಂತೆ ಕಲಬುರಗಿಯಲ್ಲಿಯೂ ಕೂಡಾ ಟೂಲ್ ಕಿಟ್ ಮಾಡಿದ್ದಾರೆ ಎಂದು ಖರ್ಗೆ ಆರೋಪ ಮಾಡಿದರು.

ರಾಜಿ ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನ: ಕಲಬರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಮಾತನಾಡಿ, ಕೋಟನೂರ್‌ ಘಟನೆ ನಡೆದ ಜ.23ರಿಂದ ತಾವು ಅಲ್ಲಿ ಭೇಟಿ ನೀಡಿದ್ದಾಗಿ ಹೇಳಿದರಲ್ಲದೆ ವೈಷಮ್ಯ ಇರುವಂತಹ ಗುಂಪುಗಳ ನಡುವೆ ಸಂಧಾನಕ್ಕೂ ಯತ್ನಿಸಿದ್ದಾಗಿ ಹೇಳಿದರು. ಜಗಳ ಬೆಳೆಸೋದು ಬೇಡವೆಂದು ಖುದ್ದು ಸಂಗಮೇಶ ಹಾಗೂ ದಿನೇಶರನ್ನ ಭೇಟಿ ಮಾಡಿ ಪರಸ್ಪರ ಸಂಧಾನಕ್ಕೂ ಪ್ರಮಾಣಿಕ ಪ್ರಯತ್ನ ಮಾಡಿದ್ದಾಗಿ ಹೇಳಿದ ಅವರು, ಜಾಮೀನಿನ ಮೇಲೆ ಹೊರಗಡೆ ಬಂದ ಮೇಲೆ ಇನ್ನೇನು ಸಂಧಾನಕ್ಕೆ ಹೋಗೋಣವೆಂದರೆ ಅದೇ ದಿನ ರಾತ್ರಿ ಹಲ್ಲೆ ಘಟನೆ ಸಂಭವಿಸಿದೆ ಎಂದರು. ಇಂತಹ ಪ್ರಕರಣಗಳಲ್ಲಿ ದ್ವೇಷ ಬೇಡ. ಸಾಮರಸ್ಯದಿಂದ ಬಾಳೋಣ ಎಂದ ಅವರು ಯಾರಿಗೂ ಜಗಳ ಬೇಡ, ಊರಲ್ಲಿನ ಸಾಮರಸ್ಯ ಕದಡುವಂತಹ ಇಂತಹ ಹಲ್ಲೆ ಘಟನೆಗಳು ಮರುಕಳಿಸಬಾರದು, ಯಾರಿಗೂ ನೋವು, ಯಾತನೆ ಆಗಬಾರದು ಎಂಬುದೇ ತಮ್ಮ ಅಭಿಮತವೆಂದರು.