ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ: ಚುನಾವಣಾ ಅಧಿಕಾರಿ ಮಂಜುನಾಥ್

| Published : Apr 26 2024, 12:56 AM IST

ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ: ಚುನಾವಣಾ ಅಧಿಕಾರಿ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತಕಟ್ಟೆಗೆ ಬಂದು ಮತವನ್ನು ಚಲಾಯಿಸಿ ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ನಿಭಾಯಿಸಬೇಕು ಎಂದು ಚುನಾವಣಾ ಅಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ಮಮತ ಎಂ. ತಿಳಿಸಿದರು. ಬೇಲೂರಿನ ವೈಡಿಡಿ ಕಾಲೇಜಿನಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಜತೆ ಸಿಬ್ಬಂದಿ ಮತಗಟ್ಟೆಗೆ ತೆರಳಲು ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದರು.

ತಹಸೀಲ್ದಾರ್ ಮಮತ ಎಂ. ಸಲಹೆ

ಕನ್ನಡಪ್ರಭ ವಾರ್ತೆ ಬೇಲೂರು

ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತಕಟ್ಟೆಗೆ ಬಂದು ಮತವನ್ನು ಚಲಾಯಿಸಿ ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ನಿಭಾಯಿಸಬೇಕು ಎಂದು ಚುನಾವಣಾ ಅಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ಮಮತ ಎಂ. ತಿಳಿಸಿದರು.

ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ಶುಕ್ರವಾರ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಜತೆ ಸಿಬ್ಬಂದಿ ಮತಗಟ್ಟೆಗೆ ತೆರಳಲು ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿ, ಬೇಲೂರು ಕ್ಷೇತ್ರದ ವ್ಯಾಪ್ತಿಯ ಲೋಕಸಭಾ ಚುನಾವಣೆ ಶಾಂತಿ ಮತ್ತು ಸುಗಮವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ 2,01,235 ಮತದಾರರಿದ್ದು, ಅದರಲ್ಲಿ 1,00,225 ಪುರುಷರು ಹಾಗೂ 1,01,010 ಮಹಿಳಾ ಮತದಾರರು ಇದ್ದಾರೆ. ಬೇಲೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 270 ಮತಗಟ್ಟೆ ಕೇಂದ್ರಗಳಿವೆ. ಅದರಲ್ಲಿ 81 ಮತಗಟ್ಟೆ ಅತಿ ಸೂಕ್ಷ್ಮ ಹಾಗೂ 129 ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಮಮತ ಎಂ. ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಆರು ವಿಶೇಷ ಹಾಗೂ ವಿವಿಧ ಅಂಶಗಳಿಂದ ಕೂಡಿದ ಮತಗಟ್ಟೆಗಳನ್ನು ಮಾಡಲಾಗಿದೆ. ಇದರಲ್ಲಿ ಅಂಗವಿಕಲರು, ಯುವಕರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಜತೆಗೆ ಬೇಲೂರು ಶಿಲ್ಪ ಕಲೆಗಳಿಗೆ ಸಂಬಂಧಪಟ್ಟ ಚಿತ್ರಕಲೆ ಇರುವ ಸಾಂಸ್ಕೃತಿಕ ಮತಗಟ್ಟೆಯನ್ನು ಬೇಲೂರು ಪುರಸಭೆಯಲ್ಲಿ ಮಾಡಲಾಗಿದೆ. ಬುಡಕಟ್ಟು ಜನಾಂಗದವರಿಗೆ ಮತವನ್ನು ಚಲಾಯಿಸಲು ಅಂಗಡಿಹಳ್ಳಿಯಲ್ಲಿ ವಿಶೇಷ ಮತಗಟ್ಟೆ ಕೇಂದ್ರ ಮಾಡಲಾಗಿದೆ ಎಂದು ವಿವಿರಿಸಿದರು.

ತಾಲೂಕಿನ ಮತಗಟ್ಟೆ ಕೇಂದ್ರಗಳಿಗೆ 1304 ಸಿಬ್ಬಂದಿ, 17 ಮೈಕ್ರೋ ಆಫೀಸರ್‌ಗಳು ಹಾಗೂ ತಾಲೂಕು ಆಡಳಿತದ ನೌಕರರು ಗುರುವಾರ ತೆರಳಲಿದ್ದಾರೆ. ಶಾಂತಿ ಮತ್ತು ಸುಗಮವಾಗಿ ಚುನಾವಣೆಯನ್ನು ನಡೆಸಲು 800 ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತಗಟ್ಟೆ ಕೇಂದ್ರಕ್ಕೆ ತೆರಳಲು 40 ಸರ್ಕಾರಿ ಬಸ್, 21 ಜೀಪ್, 5 ಮಿನಿ ಬಸ್ ಹಾಗೂ ಇತರೆ ವಾಹನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಸಿಬ್ಬಂದಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆ ಜತೆಗೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ತಾಲೂಕಿನ ಮತದಾರರು ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತಗಟ್ಟೆ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.

ಬೇಲೂರು ವೈಡಿಡಿ ಕಾಲೇಜಿನಲ್ಲಿ ಲೋಕಸಭೆ ಚುನಾವಣಾ ಸಿದ್ಧತೆ ಬಗ್ಗೆ ಚುನಾವಣೆ ಅಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ಮಮತ ಎಂ. ಮಾತನಾಡಿದರು.