ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಜೂ.3ರಂದು ಮತದಾನ

| Published : May 07 2024, 01:09 AM IST

ಸಾರಾಂಶ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಜೂ.3ರಂದು ಮತದಾನ ನಡೆಯಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳೂ ಆದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಜೂ.3ರಂದು ಮತದಾನ ನಡೆಯಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳೂ ಆದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ತಿಳಿಸಿದರು.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2ರಿಂದಲೇ ಚುನಾವಣಾ ಮಾದರಿ ನೀತಿ-ಸಂಹಿತೆ ಜಾರಿ ಜಾರಿಯಾಗಿರುತ್ತದೆ ಎಂದು ಅವರು ತಿಳಿಸಿದರು.

ಮೇ 9ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಿದ್ದು, ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೇ 17ರಂದು ನಡೆಯಲಿದ್ದು, ಮೇ 20 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಜೂ.3ರಂದು ಬೆ.8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಬೆ.8 ಗಂಟೆಯಿಂದ ಮತಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.

ನಾಮಪತ್ರಗಳ ನಮೂನೆಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚುನಾವಣೆ ಶಾಖೆಯಿಂದ ಪಡೆಯಬಹುದು. ಭರ್ತಿ ಮಾಡಿದ ನಾಮಪತ್ರಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ‘ಕಾನ್ಫರೆನ್ಸ್ ಹಾಲ್’, ಎರಡನೇ ಮಹಡಿ, ಮಿನಿ ವಿಧಾನ ಸೌಧ, ಕಲಬುರಗಿಯಲ್ಲಿ ಮೇ 9ರಿಂದ 16ರ ವರೆಗೆ ಬೆ.11ರಿಂದ ಮ.3ರ ವರೆಗೆ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಸಲ್ಲಿಸಬಹುದಾಗಿರುತ್ತದೆ. ಸ್ವೀಕೃತವಾದ ಎಲ್ಲಾ ನಾಮಪತ್ರಗಳನ್ನು ಮೇ 17ರಂದು ಬೆ.11 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ‘ಕಾನ್ಫರೆನ್ಸ್ ಹಾಲ್’ 2ನೇ ಮಹಡಿ, ಮಿನಿ ವಿಧಾನ ಸೌಧ, ಕಲಬುರಗಿಯಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಕಲಬುರಗಿ ವಿಭಾಗದ ಕಲಬುರಗಿ, ಬೀದರ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಹಾಗೂ ವಿಜಯನಗರ (ಹೊಸಪೇಟೆ) ಜಿಲ್ಲೆಗಳು ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಆಯಾ ಜಿಲ್ಲೆಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ ಎಂದು ಅವರು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 7 ಜಿಲ್ಲೆಗಳಲ್ಲಿ ಸದ್ಯಕ್ಕೆ 160 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾರರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಮತಗಟ್ಟೆಗಳ ವಿವರಗಳನ್ನು ಎರಡು ದಿನಗಳಲ್ಲಿ ನೀಡುವಂತೆ ಏಳೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಕ್ಷೇತ್ರದಲ್ಲಿ ಪುರುಷ ಮತದಾರರು 95,184, ಮಹಿಳಾ ಮತದಾರರು 54,980 ಮತ್ತು ಇತರೆ 20 ಸೇರಿ ಒಟ್ಟು 1,50,184 ಮತದಾರರಿದ್ದಾರೆ. ವಿಭಾಗದ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರು, ಮಹಾನಗರ ಪಾಲಿಕೆ, ಕಲಬುರಗಿ/ಬಳ್ಳಾರಿ, ಎಲ್ಲಾ ಸಹಾಯಕ ಆಯುಕ್ತರು/ ತಹಸೀಲ್ದಾರರು ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಅವರು ವಿವರಿಸಿದರು.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಅನ್ವಯಿಸುವ ಎಲ್ಲಾ ನಿಯಮಗಳು ಸಹ ಈ ಚುನಾವಣೆಗೆ ಅನ್ವಯಿಸುತ್ತವೆ. ಕಲಬುರಗಿ ಚುನಾವಣಾಧಿಕಾರಿಗಳ (ಪ್ರಾದೇಶಿಕ ಆಯುಕ್ತರ ಕಾರ್ಯಾಲಯ) ದೃಶ್ಯ ಮಾಧ್ಯಮ ತಂಡ ಹಾಗೂ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು ಇದು ಸಂಪೂರ್ಣ ಚುನಾವಣೆ ಪ್ರಕ್ರಿಯೇ ಮುಕ್ತಾಯಗೊಳ್ಳುವ 24/7 ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ದೂ. 08472-200255 ಈ ಸಂಖ್ಯೆಗೆ ಕರೆಮಾಡಿ ತಮ್ಮ ಅಹವಾಲು ಹಾಗೂ ದೂರುಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ.

ಪಾರದರ್ಶಕವಾಗಿ ಚುನಾವಣೆ ಜರುಗಿಸುವ ದೃಷ್ಠಯಿಂದ ಈ ಚುನಾವಣೆಗೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಚಿಸಲಾಗಿದ್ದು ಈ ತಂಡಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದು. ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ, ವಿ.ವಿ.ಟಿ, ಎಂ.ಸಿ.ಸಿ, ಎಂ.ಸಿ.ಎಂ.ಸಿ ಇನ್ನಿತರ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಮತಗಟ್ಟೆ ಸಿಬ್ಬಂದಿಗಳಿಗೆ ಮತದಾನ ದಿನಾಂಕದಂದು ಬಿಸಿ ಊಟ ವ್ಯವಸ್ಥೆ ಕಲ್ಪಿಸಲು ಮತ್ತು ಅತೀ ಉಷ್ಣಾಂಶವಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಮತದಾನ ಹಾಗೂ ಮತೇಣಿಕೆ ಕೇಂದ್ರಗಳ ಸುತ್ತಲೂ 144 ನಿಷೇಧಾಜ್ಞೆಯನ್ನು ಹೊರಡಿಸಿ ಪಾನ ನಿಷೇಧ ಆದೇಶವನ್ನು ಹೊರಡಿಸಲು ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಅವರು ಉಪಸ್ಥಿತರಿದ್ದರು.