ಉಡುಪಿ ಜಿಲ್ಲೆಯ ಐದಾರು ಗ್ರಾ.ಪಂ.ನಲ್ಲಿ ಮಾತ್ರ ನೀರಿನ ಸಮಸ್ಯೆ: ಡಿಸಿ

| Published : May 05 2024, 02:07 AM IST

ಸಾರಾಂಶ

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾವಿಗಳ ಹೂಳೆತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ. ಸದ್ಯಕ್ಕಂತೂ ನಗರದಲ್ಲಿ ನೀರಿನ ರೇಷನಿಂಗ್ ಬೇಕಾಗಿಲ್ಲ. ಮಳ‍ೆ ಬಾರದಿದ್ದರೆ ಮುಂದಿನ ವಾರದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಉಡುಪಿ ಜಿಲ್ಲೆಯ ಬೈಂದೂರು ಪುರಸಭೆಯ ಒಂದು ವಾರ್ಡ್, ಬ್ರಹ್ಮಾವರ ತಾಲೂಕಿನ 3 ಗ್ರಾ.ಪಂ. ಹಾಗೂ ಹೆಬ್ರಿ ತಾಲೂಕಿನ 2 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರ ತಾಲೂಕಿನಲ್ಲಿ ಮುಂದಿನ 10 ದಿನಗಳಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಒಳ್ಳೆಯ ಸುದ್ದಿ ನೀಡಿದೆ. ಆದ್ದರಿಂದ ಈ ಬಾರಿ ನೀರಿನ ಸಮಸ್ಯೆಯಾಗಲಿಕ್ಕಿಲ್ಲ, ಆದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾವಿಗಳ ಹೂಳೆತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ. ಸದ್ಯಕ್ಕಂತೂ ನಗರದಲ್ಲಿ ನೀರಿನ ರೇಷನಿಂಗ್ ಬೇಕಾಗಿಲ್ಲ. ಮಳ‍ೆ ಬಾರದಿದ್ದರೆ ಮುಂದಿನ ವಾರದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಸ್ತುತ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹೇಳಿದರು.ಬಾಕ್ಸ್

ಸಿಡಿಲಿನ ಬಗ್ಗೆ ಎಚ್ಚರ ಅಗತ್ಯ

ಕಳೆದ ವರ್ಷ ಮಳೆಗಾಲದಲ್ಲಿ ಉಡುಪಿ ಜಿಲ್ಲೆಯಲ್ಲಿ 10 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಈ ವರ್ಷ ಮೊದಲ ಮಳೆಗೇ ಕಾರ್ಕಳದಲ್ಲಿ ಒಬ್ಬರು ಸಿಡಿಲಿಗೆ ಸಾವನ್ನಪ್ಪಿದ್ದಾರೆ. ಸಿಡಿಲು, ಗುಡುಗು ಮಿಂಚಿನ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗೆ ಬರಬಾರದು. ಹೊರಗೆ ಇದ್ದವರೂ ಮನೆ ಅಥವಾ ಸುರಕ್ಷಿತ ಸ್ಥಳ ಸೇರಬೇಕು. ಮೊಬೈಲ್ ಉಪಯೋಗಿಸಲೇಬಾರದು. ಕಳೆದ ವರ್ಷ ಮೊಬೈಲಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಸಿಡಿಲಿಗೆ ಬಲಿಯಾಗಿದ್ದರು. ಸಿಡಿಲನ್ನು ಸೆಳೆಯುವ ಲೋಹದಂತಹ ಯಾವುದೇ ವಸ್ತುಗಳಿಂದ ದೂರ ಇರಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಮೀನುಗಾರರಿಗೆ ಎಚ್ಚರಿಕೆ

ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಸಮುದ್ರವು ಉದ್ವಿಗ್ನವಾಗಿದ್ದು, ಅಲ್ಲಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದು ಅರಬ್ಬಿ ಸಮುದ್ರದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿನ ಮೀನುಗಾರರು ಕೂಡ ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಿಸಿ ಹೇಳಿದರು.

ಮಳೆಗಾಲ ಆರಂಭವಾಗಲಿರುವುದರಿಂದ ಸಮುದ್ರದಲ್ಲಿ ಗಾಳಿ- ಅಲೆಗಳು ಹೆಚ್ಚಾಗುತ್ತವೆ. ಆದ್ದರಿಂದ ಜಿಲ್ಲೆಯ ಮತ್ತು ಹೊರಗಿನ ಪ್ರವಾಸಿಗರು ಸಮುದ್ರ ತೀರಕ್ಕೆ ತೆರಳಿದರೆ, ಸಮುದ್ರಕ್ಕೆ ಇಳಿಯದೇ ದೂರವಿರಬೇಕು ಎಂದವರು ಹೇಳಿದ್ದಾರೆ.