ನಗರದಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯಬ್ಬರ

| Published : May 07 2024, 02:07 AM IST / Updated: May 07 2024, 09:16 AM IST

ಸಾರಾಂಶ

ರಾಜಧಾನಿಯಲ್ಲಿ ಸತತ ಒಂದು ಗಂಟೆಗಳ ಕಾಲ ಸುರಿದ ವರ್ಷಧಾರೆಗೆ ಸುಮಾರು 60ಕ್ಕೂ ಹೆಚ್ಚು ಮರಗಳು ಧರಾಶಾಯಿಯಾಗಿದ್ದು, ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರ ಪರದಾಡುವಂತಾಯಿತು.

 ಬೆಂಗಳೂರು :  ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಿಂದಾಗಿ ಬೆಂಗಳೂರಿನಲ್ಲಿ ಸೋಮವಾರ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ನಗರದ ಹಲವು ಭಾಗಗಳಲ್ಲಿ 60ಕ್ಕೂ ಹೆಚ್ಚಿನ ಮರ ಹಾಗೂ ರೆಂಬೆಗಳು ಬಿದ್ದಿವೆ, ಇದರ ಜೊತೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಸಂಜೆ 6ಗಂಟೆ ನಂತರ ಆರಂಭವಾದ ಮಳೆ, ಸತತ ಒಂದು ಗಂಟೆಗಳ ಕಾಲ ಸುರಿದಿದೆ. ಮಳೆಯ ಜತೆಗೆ ಭಾರೀ ಗಾಳಿ ಬೀಸಿದ್ದರಿಂದ ನಗರ ವಿವಿಧ ಭಾಗಗಳಲ್ಲಿ ಮರ ಹಾಗೂ ಮರದ ರೆಂಬೆಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರಗಳನ್ನು ತೆರವು ಮಾಡುವ ಕೆಲಸ ಮಾಡಿದರಾದರೂ, ದೊಡ್ಡ ಗಾತ್ರಗಳ ಮರ ತೆರವಿಗೆ ಹೆಚ್ಚಿನ ಸಮಯ ಬಂದ ತೆಗೆದುಕೊಂಡ ಕಾರಣ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಪಶ್ಚಿಮ ವಲಯದಲ್ಲಿ ಅತಿಹೆಚ್ಚು ಮರಗಳು ಧರೆಗುರುಳಿದ್ದು, ಉಳಿದಂತೆ ಪೂರ್ವ, ದಕ್ಷಿಣ, ಮಹದೇವಪುರ, ರಾಜರಾಜೇಶ್ವರಿನಗರ ವಲಯಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಮರಗಳು ಬಿದ್ದಿವೆ.

60ಕ್ಕೂ ಹೆಚ್ಚಿನ ಮರಗಳು ಧರೆಗೆ

ಬಿಬಿಎಂಪಿ ಕೇಂದ್ರ ಕಚೇರಿಯ ಸಹಾಯವಾಣಿ ಮಾಹಿತಿಯ ಪ್ರಕಾರ ಪಶ್ಚಿಮ ವಲಯದಲ್ಲಿ 27, ದಕ್ಷಿಣ 18, ಪೂರ್ವ 14, ರಾಜರಾಜೇಶ್ವರಿನಗರ 6 ಹಾಗೂ ಮಹದೇವಪುರ ವಲಯದಲ್ಲಿ ಒಂದು ಮರ ಬಿದ್ದಿವೆ. ಅದರಲ್ಲಿ ಬಸವೇಶ್ವರನಗರದಲ್ಲಿ ತೆಂಗಿನ ಮರವೊಂದು ಮನೆ ಮೇಲೆ ಬಿದ್ದಿದ್ದು, ಯಾವುದೇ ಅನಾಹುತವಾಗಿಲ್ಲ. ಉಳಿದಂತೆ ಬಾಷ್ಯಂ ವೃತ್ತ, ರಾಮಕೃಷ್ಣ ಆಶ್ರಮ ರಸ್ತೆ, ಮಲ್ಲೇಶ್ವರ 8ನೇ ಮುಖ್ಯರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ರಸ್ತೆ ಮೇಲೆ ಮರ ಬಿದ್ದು ಸುಗಮ ಸಂಚಾರಕ್ಕೆ ತಡೆಯುಂಟಾಗಿತ್ತು.

ಗಾಳಿ ಸಹಿತ, ಆಲಿಕಲ್ಲು ಮಳೆ

ಮಳೆಯ ಜತೆಗೆ ಗಂಟೆಗೆ 30ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಿದೆ. ಕೆಲವೆಡೆ ಮಳೆ ಆರಂಭಕ್ಕೂ ಮುನ್ನ ಭಾರಿ ಗಾಳಿ ಬೀಸಿದೆ. ಭಾರೀ ಗಾಳಿಯಿಂದಾಗಿ ಚಂದಾಪುರ ಬಳಿಯ ಬನಹಳ್ಳಿಯಲ್ಲಿ ಮನೆಯೊಂದರ ಶೀಟ್‌ ಮುರಿದು ಬಿದ್ದಿದೆ. ಮನೆಯ ಶೀಟ್‌ಗಳ ಜತೆಗೆ ಸಿಮೆಂಟ್‌ ಬ್ಲಾಕ್‌ಗಳು ಮನೆಯೊಳಗೆ ಬಿದ್ದ ಪರಿಣಾಮ, ಮನೆಯಲ್ಲಿದ್ದ ಮೂವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ, ಜೆಪಿ ನಗರ, ಜಯನಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಳೆಯ ಜತೆಗೆ ಆಲಿಕಲ್ಲು ಬಿದ್ದಿದೆ.

ಜಲಾವೃತವಾದ ರಸ್ತೆಗಳು

ಚರಂಡಿ, ರಾಜಕಾಲುವೆಗಳಲ್ಲಿ ಶೇಖರಣೆಯಾಗಿರುವ ಹೂಳನ್ನು ಇನ್ನೂ ಸಂಪೂರ್ಣವಾಗಿ ತೆಗೆಯದ ಕಾರಣ ಹಲವು ರಸ್ತೆಗಳು ಜಲಾವೃತವಾಗಿದ್ದವು. ಮೆಜೆಸ್ಟಿಕ್‌ ಸುತ್ತಮುತ್ತಲ ರಸ್ತೆಗಳು, ಓಕಳಿಪುರ ಅಷ್ಟಪಥ ರಸ್ತೆ ಕೆಳಸೇತುವೆ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಶಿವಾನಂದ ವೃತ್ತ ಬಳಿಯ ರೈಲ್ವೆ ಕೆಳಸೇತುವೆಗಳು ಜಲಾವೃತವಾಗಿ ವಾಹನ ಸಂಚರಿಸದಂತಾಗಿತ್ತು. ಅಲ್ಲದೆ, ಬೆಂಗಳೂರು-ಹೊಸೂರು ಹೆದ್ದಾರಿಯ ಹೆನ್ನಾಗರ ಗೇಟ್‌ ಬಳಿ ಜಲಾವೃತವಾಗಿತ್ತು. ಹೆದ್ದಾರಿಯ ಜತೆಗೆ ಸರ್ವೀಸ್‌ ರಸ್ತೆ ಕೂಡ ಜಲಾವೃತವಾಗಿ ಸಮಸ್ಯೆ ಉಂಟಾಯಿತು.

ಬಾಕ್ಸ್‌: 1 13.1 ಮಿ.ಮೀ. ಮಳೆ

ಸತತ ಒಂದು ಗಂಟೆಗಳ ಕಾಲ ನಗರದಲ್ಲಿ ಮಳೆ ಸುರಿದಿದ ಪರಿಣಾಮ ನಗರದಲ್ಲಿ 13.1 ಮಿಮೀ ಮಳೆಯಾಗಿದೆ. ಪೂರ್ವ ವಲಯದಲ್ಲಿ ಅತಿಹೆಚ್ಚು 9.25 ಮಿಮೀ ಮಳೆಯಾಗಿದೆ ಉಳಿದಂತೆ ರಾಜರಾಜೇಶ್ವರಿ ನಗರ 8.69 ಮಿಮೀ, ಪಶ್ಚಿಮ 8.28 ಮಿಮೀ, ಮಹದೇವಪುರ 8.13 ಮಿಮೀ, ಯಲಹಂಕ 8.1 ಮಿಮೀ, ದಕ್ಷಿಣ 7.53 ಮಿಮೀ, ಬೊಮ್ಮನಹಳ್ಳಿ 7.56 ಮಿಮೀ, ದಾಸರಹಳ್ಳಿ ವಲಯದಲ್ಲಿ 6.86 ಮಿಮೀ ಮಳೆ ಸುರಿದಿದೆ.

ಆನೇಕಲ್‌ನಲ್ಲೂ ಗುಡುಗು, ಮಳೆ

ಆನೇಕಲ್: ಆನೇಕಲ್ ನಗರ ಸೇರಿದಂತೆ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸಾಧಾರಣ ಮಳೆ ಆಗಿದೆ. ಕೆಲವೆಡೆ ಗುಡುಗು ಮಿಂಚು ಸಹಿತ ಅಬ್ಬರದ ಮಳೆಯಾದರೆ ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗಿದೆ.ಸಂಜೆ 5 ಗಂಟೆ ವೇಳೆಗೆ ತಂಪು ಹವೆಯ ವಾತಾವರಣ ಕಂಡು ಬಂದು ಕಪ್ಪನೆಯ ಮೋಡಗಳು ಸಾಂದ್ರವಾಗಿ ಇನ್ನೇನು ಉತ್ತಮ ಮಳೆ ಆಗಬಹುದು ಎಂಬ ಭಾವನೆ ಮೂಡಿತ್ತಾದರೂ ಕೇವಲ ಒಂದೆರಡು ನಿಮಿಷ ಮಳೆ ಸುರಿದು ಬರಿದಾಯಿತು. ಇನ್ನೂ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆಗೆ ಮಳೆಯ ನಿರೀಕ್ಷೆಯಿದೆ.

ಉಳಿದಂತೆ ಅತ್ತಿಬೆಲೆ, ಚಂದಾಪುರ, ಜಿಗಣಿ ಸುತ್ತಮುತ್ತ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಕಾದು ಕೆಂಡವಾಗಿದ್ದ ಭೂಮಿಗೆ ವರುಣ ಸಿಂಚನದಿಂದ ತಂಪಾಗಿದೆ.ದಿಢೀರ್ ಸುರಿದ ಮಳೆಯಿಂದ ಪಾದಚಾರಿ ಗಳು ಹಾಗೂ ದ್ವಿಚಕ್ರ ವಾಹನ ಸವಾರರು ಅಲ್ಲಲ್ಲಿ ಆಶ್ರಯ ಪಡೆದರು. ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಒಣಗಿದ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದವು.