ಮುಸ್ಲಿಂ ಮೀಸಲು ರದ್ದಿಲ್ಲ: ಬಿಜೆಪಿ ಮಿತ್ರ ಪಕ್ಷ ಟಿಡಿಪಿ

| Published : May 06 2024, 12:33 AM IST / Updated: May 06 2024, 04:43 AM IST

ಸಾರಾಂಶ

ರಾಜ್ಯದಲ್ಲಿ ಮುಸ್ಲಿಮರಿಗೆ ನೀಡುತ್ತಿರುವ ಶೇ.4ರಷ್ಟು ಮೀಸಲು ಮುಂದುವರೆಸಲು ತಮ್ಮ ಪಕ್ಷದ ಬೆಂಬಲ ಇದೆ ಎಂದು ಬಿಜೆಪಿ ಮಿತ್ರಪಕ್ಷವಾದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಧರ್ಮಾವರಂ: ರಾಜ್ಯದಲ್ಲಿ ಮುಸ್ಲಿಮರಿಗೆ ನೀಡುತ್ತಿರುವ ಶೇ.4ರಷ್ಟು ಮೀಸಲು ಮುಂದುವರೆಸಲು ತಮ್ಮ ಪಕ್ಷದ ಬೆಂಬಲ ಇದೆ ಎಂದು ಬಿಜೆಪಿ ಮಿತ್ರಪಕ್ಷವಾದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಭಾನುವಾರ ಇಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ನಾಯ್ಡು, ‘ಆರಂಭದಿಂದಲೂ ನಾವು ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ಬೆಂಬಲಿಸಿಕೊಂಡೇ ಬಂದಿದ್ದೇವೆ ಮತ್ತು ಅದು ಹಾಗೆಯೇ ಮುಂದುವರೆಯಲಿದೆ’ ಎಂದು ಹೇಳಿದರು.

ಪ್ರಧಾನಿ ಮೋದಿ ಇತ್ತೀಚೆಗೆ ತೆಲಂಗಾಣದ ಜಹೀರಾಬಾದ್‌ನಲ್ಲಿ, ಒಬಿಸಿಗಳ ಮೀಸಲು ಕಸಿದು ಯಾವುದೇ ಕಾರಣಕ್ಕೂ ಅದನ್ನು ಮುಸ್ಲಿಮರಿಗೆ ನೀಡಲು ಬಿಡಲ್ಲ ಎಂದು ಗುಡುಗಿದ್ದರು. ಜೊತೆಗೆ ಕಳೆದ 15 ದಿನಗಳಿಂದ ಇದೇ ವಿಷಯವನ್ನು ದೇಶವ್ಯಾಪಿ ಹಲವು ರಾಜ್ಯಗಳಲ್ಲಿ ಪುನರುಚ್ಚರಿಸಿದ್ದರು. ಅದರ ಹೊರತಾಗಿಯೂ ನಾಯ್ಡು ಮುಸ್ಲಿಂ ಮೀಸಲು ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಆಂಧ್ರದಲ್ಲಿ ಟಿಡಿಪಿ-ಜನಸೇನಾ ಮತ್ತು ಬಿಜೆಪಿ ಮೈತ್ರಿಮಾಡಿಕೊಂಡು ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸುತ್ತಿವೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕೆಲವು ಭರ್ಜರಿ ಭರವಸೆ ಘೋಷಿಸಲಾಗಿತ್ತಾದರೂ ಅದರಲ್ಲಿ ಮುಸ್ಲಿಂ ಮೀಸಲು ವಿಚಾರ ಪ್ರಸ್ತಾಪ ಮಾಡಿರಲಿಲ್ಲ. ಮತ್ತೊಂದೆಡೆ ಬಿಜೆಪಿ ಇದು ಟಿಡಿಪಿ-ಜನಸೇನಾ ಪ್ರಣಾಳಿಕೆ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿತ್ತು.