ಕಸಬ್‌ಗೆ ಶಿಕ್ಷೆ ಕೊಡಿಸಿದ್ದ ಉಜ್ವಲ್‌ ನಿಕಂ ‘ದೇಶದ್ರೋಹಿ’ ಎಂದ ಕಾಂಗ್ರೆಸ್‌

| Published : May 06 2024, 12:36 AM IST / Updated: May 06 2024, 04:39 AM IST

ಕಸಬ್‌ಗೆ ಶಿಕ್ಷೆ ಕೊಡಿಸಿದ್ದ ಉಜ್ವಲ್‌ ನಿಕಂ ‘ದೇಶದ್ರೋಹಿ’ ಎಂದ ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

26/11 ಮುಂಬೈ ಭಯೋತ್ಪಾದಕ ದಾಳಿಯ ಉಗ್ರ ಅಜ್ಮಲ್‌ ಕಸಬ್‌ಗೆ ಗಲ್ಲುಶಿಕ್ಷೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಂದಿನ ಮಹಾರಾಷ್ಟ್ರದ ಸರ್ಕಾರಿ ವಕೀಲ ಹಾಗೂ ಪ್ರಸಕ್ತ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಉಜ್ವಲ್‌ ನಿಕಂ ‘ದೇಶದ್ರೋಹಿ’ ಎಂದು ಕಾಂಗ್ರೆಸ್‌ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ

 ಮುಂಬೈ :  26/11 ಮುಂಬೈ ಭಯೋತ್ಪಾದಕ ದಾಳಿಯ ಉಗ್ರ ಅಜ್ಮಲ್‌ ಕಸಬ್‌ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಂದಿನ ಮಹಾರಾಷ್ಟ್ರದ ಸರ್ಕಾರಿ ವಕೀಲ ಹಾಗೂ ಪ್ರಸಕ್ತ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಉಜ್ವಲ್‌ ನಿಕಂ ‘ದೇಶದ್ರೋಹಿ’ ಎಂದು ಕಾಂಗ್ರೆಸ್‌ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಇದು ಭಾರಿ ವಿವಾದಕ್ಕೀಡಾಗಿದ್ದು, ‘ಕಾಂಗ್ರೆಸ್‌ ಕಸಬ್‌ ಪರ ಪಕ್ಷ’ ಎಂದು ಬಿಜೆಪಿ ಕಿಡಿಕಾರಿದೆ. ಅಲ್ಲದೆ, ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಿದೆ.

ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ಹಾಗೂ ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್‌, ‘ಉಗ್ರರ ವಿರುದ್ಧ ಹೋರಾಡುವಾಗ ಎಸ್‌ಟಿಎಫ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ಗುಂಡು ತಗುಲಿ ಸಾವನ್ನಪ್ಪಿದ್ದರು. ಆದರೆ ಆ ಗುಂಡು ಹಾರಿಸಿದ್ದು ಕಸಬ್‌ ಆಗಿರಲಿಲ್ಲ. ಬದಲಿಗೆ ಆರ್‌ಎಸ್‌ಎಸ್‌ ಬೆಂಬಲಿತ ಪೊಲೀಸ್‌ ಅಧಿಕಾರಿಯಾಗಿತ್ತು. ಅದನ್ನು ನಿಕಂ ಮುಚ್ಚಿಟ್ಟು ಆರ್‌ಎಸ್‌ಎಸ್‌ ಬೆಂಬಲಿತ ಅಧಿಕಾರಿಯನ್ನು ರಕ್ಷಿಸಿದ್ದರು. ಹೀಗಾಗಿ ಅವರೊಬ್ಬ ದೇಶದ್ರೋಹಿ’ ಎಂದು ಆರೋಪಿಸಿದ್ದಾರೆ.

ವಕ್ತಾರೆ ಕಿಡಿ:

ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಕೂಡ ನಿಕಂ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅಜ್ಮಲ್‌ ಕಸಬ್‌ಗೆ ಜೈಲಿನಲ್ಲಿ ಬಿರ್ಯಾನಿ ನೀಡಲಾಗುತ್ತಿದೆ ಎಂದು ನಿಕಂ ಸುಳ್ಳು ಹೇಳಿದ್ದರು. ನಂತರ ಅದು ಸುಳ್ಳೆಂದು ಅವರೇ ಒಪ್ಪಿಕೊಂಡಿದ್ದರು. ಇಂತಹ ಸುಳ್ಳುಗಾರನಿಗೆ ಹಾಲಿ ಮಹಿಳಾ ಸಂಸದೆ ಪೂನಂ ಮಹಾಜನ್‌ಗೆ ಟಿಕೆಟ್‌ ತಪ್ಪಿಸಿ ಬಿಜೆಪಿಗರು ಲೋಕಸಭೆಗೆ ಟಿಕೆಟ್ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಆರೋಪಗಳನ್ನು ನಿಕಂ ಅಲ್ಲಗಳೆದಿದ್ದು, ‘ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಅಂದುಕೊಂಡಿರಲಿಲ್ಲ, ಖುದ್ದು ಪಾಕಿಸ್ತಾನವೇ ಕಸಬ್‌ ದಾಳಿ ನಡೆಸಿದ್ದ ಎಂದು ಹೇಳಿತ್ತು’ ಎಂದಿದ್ದಾರೆ.

ಇದೇ ವೇಳೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌ ಕಸಬ್‌ ಪರ ಪಕ್ಷ ಎಂದು ಸಾಬೀತಾಗಿದೆ’ ಎಂದಿದ್ದಾರೆ.ನಿಕಂ ಅವರಿಗೆ ಬಿಜೆಪಿಯಿಂದ ಮುಂಬೈ ಮಧ್ಯ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.