ಪಾಕ್‌ ಜಿಂದಾಬಾದ್‌ ಎಂದರೆ ದೇಶ ವಿರೋಧಿ ಅಲ್ಲವೇ?: ನಡ್ಡಾ

| Published : May 06 2024, 12:34 AM IST / Updated: May 06 2024, 04:42 AM IST

ಸಾರಾಂಶ

‘ಕಾಂಗ್ರೆಸ್‌ನಲ್ಲಿ ದೇಶವಿಭಜನೆ, ಪಾಕ್‌ ಪರ ಘೋಷಣೆ ಕೂಗಿದರೂ, ಯಾರೂ ಸಹ ಬಾಯಿ ಬಿಡುವುದಿಲ್ಲ. ಇದು ದೇಶ ವಿರೋಧಿ ಚಟುವಟಿಕೆಯಲ್ಲವೇ? ಅದಕ್ಕೂ ಯಾವುದೇ ಉತ್ತರ ಬರಲಿಲ್ಲ. ಇವು ದೇಶ ವಿರೋಧಿ ಅಲ್ಲವೇ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

 ಸೂರಜ್‌ಪುರ (ಛತ್ತೀಸ್‌ಗಢ) :  ‘ಕಾಂಗ್ರೆಸ್‌ನಲ್ಲಿ ದೇಶವಿಭಜನೆ, ಪಾಕ್‌ ಪರ ಘೋಷಣೆ ಕೂಗಿದರೂ, ಯಾರೂ ಸಹ ಬಾಯಿ ಬಿಡುವುದಿಲ್ಲ. ಇದು ದೇಶ ವಿರೋಧಿ ಚಟುವಟಿಕೆಯಲ್ಲವೇ? ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ದೇಶ ವಿಭಜನೆ ಮಾತುಗಳನ್ನು ಆಡಿದರು, ಆದರೆ ಖರ್ಗೆ ಅದರ ಬಗ್ಗೆ ಏನು ಹೇಳಲಿಲ್ಲ. ಬಳಿಕ ಕರ್ನಾಟಕದ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದರೂ. ಅದಕ್ಕೂ ಯಾವುದೇ ಉತ್ತರ ಬರಲಿಲ್ಲ. ಇವು ದೇಶ ವಿರೋಧಿ ಅಲ್ಲವೇ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು,‘ಕಾಂಗ್ರೆಸ್‌ನವರು ತಮ್ಮ ಬಿಡದಲ್ಲಿಯೇ ದೇಶವಿರೋಧಿ ಚಟುವಟಿಕೆಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಅವರು ಮುಸ್ಲಿಮರ ಪೋಷಣೆ ಮಾಡುತ್ತಲೇ ಇದ್ದಾರೆ. ಕಾಂಗ್ರೆಸ್‌ ದಲಿತರು, ಆದಿವಾಸಿಗಳು, ಒಬಿಸಿಗಳ ಮೀಸಲನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡುತ್ತಾರೆ’ ಎಂದು ಗುಡುಗಿದರು.

ಅಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸಹ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಮರಿಗೆ ಇರುತ್ತದೆ ಎಂದು ಹೇಳಿದ್ದರು. ಈಗ ಕಾಂಗ್ರೆಸ್‌ ಅದನ್ನೇ ಮಾಡಲು ಯೋಜಿಸುತ್ತಿದೆ. ಅಂದು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಮೀಸಲು ಜಾತಿ ಧರ್ಮವನ್ನು ಆಧರಿಸಬಾರದು. ಅದು ಕೇವಲ ಶೋಷಿತರಿಗೆ ನೀಡಬೇಕು ಎಂದು ಸಂವಿಧಾನದಲ್ಲಿ ಬರೆದಿದ್ದರು. ಆದರೆ ಕಾಂಗ್ರೆಸ್‌ ಇದರ ವಿರುದ್ಧವೇ ನಡೆದುಕೊಂಡು ಬಂದಿದೆ ಎಂದು ಕಿಡಿಕಾರಿದರು.

10 ವರ್ಷಗಳ ಹಿಂದೆ ವೋಟ್‌ ಬ್ಯಾಂಕ್ ರಾಜಕಾರಣ, ಜಾತಿ, ಧರ್ಮ ಇವುಗಳ ಮೇಲೆ ರಾಜಕೀಯ ನಡೆಯುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಬದಲಿಸಿದರು. ಈಗಿನ ಚುನಾವಣೆ ವಿಕಸಿತ ಭಾರತದ ಮೇಲೆ ನಡೆಯುತ್ತಿದೆ ಎಂದು ನಡ್ಡಾ ಹೇಳಿದರು.