ರಾಹುಲ್‌ ಬೆಂಕಿಯಲ್ಲ, ಬೆಂಕಿ ಜೊತೆ ಕಾಂಗ್ರೆಸ್‌ ಆಟ ಆಡ್ತಿದೆ : ರಾಜನಾಥ್‌

| Published : May 06 2024, 12:36 AM IST / Updated: May 06 2024, 04:35 AM IST

ಸಾರಾಂಶ

ರಾಹುಲ್‌ ಗಾಂಧಿ ಬೆಂಕಿಯಲ್ಲ, ಆದರೆ ಚುನಾವಣಾ ಲಾಭಕ್ಕಾಗಿ ಹಿಂದೂ- ಮುಸ್ಲಿಂ ವಿಭಜನೆಯ ಯತ್ನದ ಮೂಲಕ ಕಾಂಗ್ರೆಸ್‌ ಬೆಂಕಿ ಜೊತೆ ಕಾಂಗ್ರೆಸ್‌ ಆಟ ಆಡ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಚ್ಚರಿಸಿದ್ದಾರೆ.

 ನವದೆಹಲಿ :    ರಾಹುಲ್‌ ಗಾಂಧಿ ಬೆಂಕಿಯಲ್ಲ, ಆದರೆ ಚುನಾವಣಾ ಲಾಭಕ್ಕಾಗಿ ಹಿಂದೂ- ಮುಸ್ಲಿಂ ವಿಭಜನೆಯ ಯತ್ನದ ಮೂಲಕ ಕಾಂಗ್ರೆಸ್‌ ಬೆಂಕಿ ಜೊತೆ ಕಾಂಗ್ರೆಸ್‌ ಆಟ ಆಡ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಚ್ಚರಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ರಾಹುಲ್‌ ಗಾಂಧಿ ಭಾಷಣವನ್ನು ಬೆಂಕಿ ಭಾಷಣ ಎಂದು ಪಾಕ್‌ ಸಚಿವ ಫವಾದ್‌ ಹುಸ್ಸೇನ್‌ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜನಾಥ್‌, ‘ಧರ್ಮದ ಆಧಾರದಲ್ಲಿ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಚುನಾವಣಾ ಲಾಭಕ್ಕಾಗಿ ಅವರು ಹಿಂದೂ- ಮುಸ್ಲಿಂ ವಿಭಜನೆ ಮಾಡುತ್ತಿದ್ದಾರೆ. ಮುಸ್ಲಿಮರು ಅವರ ಪಾಲಿಗೆ ಕೇವಲ ವೋಟ್‌ ಬ್ಯಾಂಕ್‌ ಅಷ್ಟೇ. ಇಂಥ ಪ್ರಯತ್ನಗಳ ಮೂಲಕ ಕಾಂಗ್ರೆಸ್‌ ಬೆಂಕಿ ಜೊತೆ ಆಡುವ ಯತ್ನ ಮಾಡುತ್ತಿದೆ’ ಎಂದು ಎಚ್ಚರಿಸಿದರು.

ಇದೇ ವೇಳೆ ಈ ಬಾರಿ ಎನ್‌ಡಿಐ ಮೈತ್ರಿಕೂಟ 400ಕ್ಕಿಂತ ಅಧಿಕಾರ ಸ್ಥಾನ ಗೆದ್ದು ಅಧಿಕಾರಕ್ಕೆ ಮರಳುವುದು ಖಚಿತ ಎಂದ ಸಿಂಗ್‌, ‘ಈ ಬಾರಿ ನಾವು ಏಕರೂಪ ನಾಗರಿಕ ಸಂಹಿತೆ, ಒಂದು ದೇಶ, ಒಂದು ಚುನಾವಣೆಯಂಥ ಮಹತ್ವದ ಯೋಜನೆ ಜಾರಿಗೊಳಿಸಲಿದ್ದೇವೆ. ಯುಪಿ, ಬಂಗಾಳದಲ್ಲಿ ನಮ್ಮ ಬಲ ಹೆಚ್ಚಲಿದೆ. ತಮಿಳ್ನಾಡಲ್ಲಿ ಕೆಲ ಸೀಟು ಗೆಲ್ಲಲಿದ್ದೇವೆ; ಕೇರಳದಲ್ಲಿ ಖಾತೆ ಆರಂಭವಾಗಲಿದೆ; ಆಂಧ್ರ, ತೆಲಂಗಾಣದಲ್ಲೂ ಉತ್ತಮ ಪ್ರಮಾಣದ ಸ್ಥಾನ ಪಡೆಯಲಿದ್ದೇವೆ’ ಎಂದರು.

ಈ ನಡುವೆ ಸಂಪತ್ತಿನ ಹಂಚಿಕೆ ಕುರಿತ ರಾಹುಲ್‌ ಭರವಸೆ ದೇಶವನ್ನು ವಿನಾಶದ ಅಂಚಿಗೆ ದೂಡಲಿದೆ ಎಂದು ಎಚ್ಚರಿಸಿದ ರಾಜ್‌ನಾಥ್‌, ಇಂಥ ಹೇಳಿಕೆಗಳು ಭಾರತದ ಮೇಲೆ ಹೂಡಿಕೆದಾರರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಲಿದೆ. ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಂಥ ಯೋಜನೆ ಜಾರಿಗೊಳಿಸಿದ ಅರ್ಜೆಂಟೀನಾ ಮತ್ತು ವೆನಿಜುವೆಲಾ ಅನಾಹುತಕಾರಿ ಪರಿಣಾಮಗಳನ್ನು’ ಎದುರಿಸಿವೆ ಎಂದರು.

ಸಂವಿಧಾನ ಬದಲಿಗೆ ಅವಕಾಶ ನೀಡಲ್ಲ:

ಇನ್ನು ಬಿಜೆಪಿ ಗೆದ್ದರೆ ಅದು ಸಂವಿಧಾನ ಬದಲಿಸಲಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೂ ತಿರುಗೇಟು ನೀಡಿದ ಸಿಂಗ್‌, ಬಿಜೆಪಿ ಎಂದೆಂದಿಗೂ ಸಂವಿಧಾನ ಬದಲಿಸಲ್ಲ ಜೊತೆಗೆ ಹಿಂದುಳಿದ ಸಮುದಾಯಕ್ಕೆ ನೀಡಿದ ಮೀಸಲು ರದ್ದುಪಡಿಸಲ್ಲ ಎಂದರು. ಇಂಥ ಆರೋಪ ಮಾಡುವ ಕಾಂಗ್ರೆಸ್‌ 80 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ ಎಂದರು.