ರಾಮನಗರ : ಅಪಘಾತವೊಂದರಲ್ಲಿ ಪೆಟ್ಟಾದ ಕಾರಣ ಕಾಲು ನೋವಿನಿಂದಾಗಿ ಮೆಟ್ಟಿಲು ಹತ್ತಲಾಗದೆ ಕೋರ್ಟ್‌ನ ಹೊರಗೆ ಕುಳಿತಿದ್ದ ಮಹಿಳೆಯೊಬ್ಬರಿದ್ದಲ್ಲಿಗೆ ನ್ಯಾಯಾಧೀಶರೇ ಬಂದು ವಿಚಾರಣೆ ನಡೆಸಿದ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್. ಅವಿನಾಶ್ ಚಿಂದು ಮಾನವೀಯತೆ ಮೆರೆದ ನ್ಯಾಯಾಧೀಶರು.
ನಗರದ ಚಲುವಯ್ಯ ಎಂಬುವರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅವರ ಹತ್ತು ಮಕ್ಕಳಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಮಕ್ಕಳ ಪರ ವಕೀಲರು ದಾಖಲೆಗಳನ್ನು ಸಲ್ಲಿಸಿದ ನಂತರ, ನ್ಯಾಯಾಧೀಶರು ಪರಿಹಾರ ನೀಡಲು ಆದೇಶಿಸಿದರು.
ಈ ಸಂದರ್ಭದಲ್ಲಿ, ಚಲುವಯ್ಯನವರ ಪುತ್ರಿ ಯಶೋಧಮ್ಮಗೆ ಕಾಲು ಪೆಟ್ಟಾಗಿದ್ದು, ನೋವಿನಿಂದಾಗಿ ಕೋರ್ಟ್ ಒಳಗೆ ಬರಲು ಸಾಧ್ಯವಾಗಿರಲಿಲ್ಲ. ಆಕೆ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದರು. ಯಶೋಧಮ್ಮಗೆ ಕೋರ್ಟ್ ಒಳಗೆ ಬರಲು ಸಾಧ್ಯವಾಗದ ಕಾರಣ ನ್ಯಾಯಾಧೀಶರು ಆಕೆಯಿದ್ದಲ್ಲಿಗೆ ಬಂದು ವಿಚಾರಣೆ ನಡೆಸಿ, ಮೃತರ ವಾರಸುದಾರರಿಗೆ ₹1 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಿದರು. ಜೂನ್ 29ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.