ರಾಮನಗರ ಜಿಲ್ಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರು ನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಬೆಂಗಳೂರು : ಕೇಂದ್ರ ಗೃಹ ಇಲಾಖೆಯ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರು ನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು 2024ರ ಜುಲೈನಲ್ಲೇ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿತ್ತು. ಈ ನಿರ್ಣಯವನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೋರಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು.
ಇದರ ನಡುವೆಯೂ ಇದೀಗ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಷಯ ಮಂಡಿಸಿ, ಮರು ನಾಮಕರಣ ಪ್ರಸ್ತಾವನೆಗೆ ಅನುಮೋದನೆ ಪಡೆದಿದ್ದಾರೆ.
ಈ ವೇಳೆ ಪ್ರಸ್ತಾವನೆಯಲ್ಲಿ, ‘ಸಂವಿಧಾನ 7ನೇ ಪರಿಚ್ಛೇದವು ಒಕ್ಕೂಟ ಪಟ್ಟಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ವಿವರಿಸುತ್ತದೆ. ರಾಜ್ಯ ಪಟ್ಟಿಯ ಸಂಖ್ಯೆ 18ರಲ್ಲಿ ಬರುವ ಭೂಮಿ ವಿಷಯವು ರಾಜ್ಯ ವಿಷಯ. ಜತೆಗೆ ರಾಜ್ಯಪಟ್ಟಿಯ ವಿಷಯ ಸಂಖ್ಯೆ 45ರಲ್ಲಿ ಬರುವ ಭೂ ಕಂದಾಯ ವಿಷಯವೂ ರಾಜ್ಯದ ವಿಷಯ. ಹೀಗಾಗಿ ಜಿಲ್ಲೆಯ ಹೆಸರು ಮರುನಾಮಕರಣ ಮಾಡಲು ಕೇಂದ್ರದ ಒಪ್ಪಿಗೆ ಅಗತ್ಯವಿಲ್ಲ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ (4) ರಲ್ಲಿ ರಾಜ್ಯಕ್ಕೆ ವಲಯ, ತಾಲೂಕು, ಜಿಲ್ಲೆ ರಚನೆ, ಬದಲಾವಣೆ, ರದ್ದುಪಡಿಸುವ ಹಾಗೂ ಹೆಸರು ಮರುನಾಮಕರಣ ಮಾಡುವ ಅವಕಾಶವಿದೆ. ಹೀಗಾಗಿ ಅನುಮೋದನೆ ನೀಡಬೇಕು’ ಎಂದು ಹೇಳಿದ್ದರು.
ರಾಮನಗರವೇ ಜಿಲ್ಲಾ ಕೇಂದ್ರ-ಡಿಕೆಶಿ:
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರೆಯಲಿದೆ. ಕೇವಲ ಜಿಲ್ಲೆಯ ಹೆಸರನ್ನು ಮಾತ್ರ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರ ಬೀಳಲಿದೆ. ಇನ್ನು ಮುಂದೆ ನನ್ನನ್ನು ಬೆಂಗಳೂರು ದಕ್ಷಿಣ ಜಿಲ್ಲೆಯವನು ಎಂದು ಹೇಳಿ’ ಎಂದು ಸ್ಪಷ್ಟಪಡಿಸಿದರು.
ರಾಮನಗರ ಈ ಹಿಂದೆ ಬೆಂಗಳೂರು ಜಿಲ್ಲೆಯಾಗಿತ್ತು. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ರಾಮನಗರ, ಕನಕಪುರ ಇವೆಲ್ಲವೂ ಬೆಂಗಳೂರಿನ ಭಾಗ. ನಾನು ಹಿಂದೆ ಬೆಂಗಳೂರು ಜಿಪಂ ಸದಸ್ಯನಾಗಿದ್ದೆ. ರಾಮನಗರ ಎಂಬುದು ಬೆಂಗಳೂರಿನಿಂದ ಬೇರ್ಪಡಿಸಿ ಮಾಡಿರುವ ಜಿಲ್ಲೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಹೆಸರು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಿರುವ ವಿಷಯ ಹೇಳಲು ಸಂತೋಷ ಆಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕೇಂದ್ರದ ಅನುಮತಿ ಬೇಕಾಗಿಲ್ಲ:
ಕೇಂದ್ರ ಸರ್ಕಾರ ವಿರೋಧ ಮಾಡಿದೆಯಲ್ಲ ಎಂಬ ಪ್ರಶ್ನೆಗೆ, ಜಿಲ್ಲೆಗಳ ಹೆಸರು ನಾಮಕರಣ ಮಾಡುವುದು ರಾಜ್ಯದ ವಿಷಯ. ಕಂದಾಯ ಇಲಾಖೆಯು ಮಾಹಿತಿಗಾಗಿ ಅಷ್ಟೇ ಕೇಂದ್ರಕ್ಕೆ ಮರುನಾಮಕರಣ ತೀರ್ಮಾನವನ್ನು ಕಳುಹಿಸಿತ್ತು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಕೇಂದ್ರಕ್ಕೆ ಅಧಿಕಾರ ಇಲ್ಲ. ರಾಮನಗರ ಎಂದು ನಾಮಕರಣ ಮಾಡುವಾಗಲೂ ಕೇಂದ್ರದ ಅನುಮತಿ ಪಡೆದಿಲ್ಲ. ಹೀಗಾಗಿ ಕೇಂದ್ರದ ಅನುಮತಿ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆಸರು ಬದಲಾವಣೆ ಬಗ್ಗೆ ಗೊಂದಲ ಬೇಡ:
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಎಲ್ಲಾ ಭೂ ದಾಖಲೆಗಳನ್ನು ತಕ್ಷಣ ಬದಲಿಸುವ ಅಗತ್ಯವಿಲ್ಲ. ನಮ್ಮ ಬಳಿ ಇರುವ ದಾಖಲೆಗಳಲ್ಲಿ ಹೆಸರು ಬದಲಿಸಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿಲ್ಲ. ಹೊಸದಾಗಿ ಸೃಜನೆಯಾಗುವ ದಾಖಲೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಮೂದಿಸಲಾಗುತ್ತದೆ. ಹಳೆಯ ದಾಖಲೆಗಳಲ್ಲಿ ರಾಮನಗರ ಜಿಲ್ಲೆ ಎಂದು ಇದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಬೇಕಾಗಿಲ್ಲ ಎಂದು ಹೇಳಿದರು.
ಜಿಲ್ಲೆಗಳ ಹೆಸರು ನಾಮಕರಣ ಮಾಡುವುದು ರಾಜ್ಯದ ವಿಷಯ. ಈ ಹಿಂದೆ ರಾಮನಗರ ಎಂದು ಹೆಸರು ಬದಲಿಸಿದಾಗಲೂ ಕೇಂದ್ರದ ಅನುಮತಿಯನ್ನೇನು ಪಡೆದಿರಲಿಲ್ಲ. ಈಗಲೂ ಅನುಮತಿ ಬೇಕಿಲ್ಲ. ರಾಮನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ. ಜಿಲ್ಲೆಯ ಹೆಸರು ಮಾತ್ರ ಬದಲಾಗುತ್ತದೆ. ಶೀಘ್ರ ಆದೇಶ ಹೊರಬೀಳಲಿದೆ. ಇನ್ನು ಮುಂದೆ ನನ್ನನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆಯವನು’ ಎಂದು ಹೇಳಿ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ