ಚನ್ನಪಟ್ಟಣ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ರೈತರು ಚನ್ನಪಟ್ಟಣ-ಕಬ್ಬಾಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ರೈತರು ಚನ್ನಪಟ್ಟಣ-ಕಬ್ಬಾಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ-ಕಬ್ಬಾಳು ರಸ್ತೆಯಲ್ಲಿ ಜಮಾಯಿಸಿದ ನೂರಾರು ರೈತರು, ಕಾಡಾನೆ ಹಾವಳಿಯಿಂದ ರೈತರು ಬಸವಳಿದಿದ್ದಾರೆ. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಜಮೀನನ್ನು ಸರ್ಕಾರವೇ ಇಟ್ಟುಕೊಂಡು ವರ್ಷಕ್ಕಿಷ್ಟು ಎಂದು ಹಣ ನೀಡಬೇಕು. ಕಳೆದ ಹತ್ತಾರು ವರ್ಷಗಳಿಂದ ಈ ಭಾಗದ ಜನ ಕಾಡಾನೆ ದಾಳಿಯಿಂದ ನಲುಗಿದ್ದಾರೆ. ಜಮೀನುಗಳಲ್ಲಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡಾನೆಗಳು ಕ್ಷಣಾರ್ಧದಲ್ಲಿ ಧ್ವಂಸ ಮಾಡುತ್ತಿವೆ. ಯಾವಾಗ ಯಾವ ಕಾಡು ಪ್ರಾಣಿಗಳು ದಾಳಿ ಮಾಡುತ್ತದೋ, ಬೆಳೆ ಜೊತೆಗೆ ಜೀವ ಸಹ ಅಪಾಯಕ್ಕೆ ಸಿಲುಕುತ್ತದೋ ಎಂಬ ಆತಂಕದಲ್ಲೆ ಜೀವನ ನಡೆಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವಂತೆ ನಾವು ಮಾಡಿರುವ ಹೋರಾಟಗಳಿಗೆ ಲೆಕ್ಕವಿಲ್ಲ, ಕಾಡು ಪ್ರಾಣಿಗಳ ಹಾವಳಿಯಿಂದ ಈ ಭಾಗದ ರೈತರು ಇದುವರೆಗೆ ಕೋಟ್ಯಾಂತರ ನಷ್ಟ ಅನುಭವಿಸಿದ್ದಾರೆ. ಆದರೆ, ಇದಕ್ಕೆ ಸರ್ಕಾರ ನೀಡುವ ಪರಿಹಾರ ಮಾತ್ರ ಏತಕ್ಕೂ ಸಾಲದಾಗಿದೆ. ಪ್ರತಿವರ್ಷ ನಷ್ಟ ಮಾಡಿಕೊಂಡು ವ್ಯವಸಾಯ ಮಾಡುವ ಬದಲು ನಮ್ಮ ಜಮೀನುಗಳನ್ನು ಸರ್ಕಾರವೇ ಇಟ್ಟುಕೊಂಡು ವರ್ಷಕ್ಕಿಷ್ಟು ಹಣವನ್ನು ನಿಗದಿ ಮಾಡಲಿ ನಾವೂ ನಿಮ್ಮಂತೆ ನೆಮ್ಮದಿಯಾಗಿ ಜೀವಿಸುತ್ತೇವೆ ಎಂದು ಆಗ್ರಹಿಸಿದರು.

ರಸ್ತೆಯಲ್ಲೆ ಅಡುಗೆ:

ಮಂಗಳವಾರ ಬೆಳಿಗ್ಗೆಯಿಂದಲೇ ಹೆದ್ದಾರಿಯಲ್ಲಿ ಕುಳಿತ ರೈತರು ವಾಹನಗಳ ತಡೆದ ರೈತರು ರಸ್ತೆಯಲ್ಲಿಯೇ ಕುಳಿತು ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೊಲೀಸರು ಅರಣ್ಯ ಇಲಾಖಾ ಅಧಿಕಾರಿಗಳು ಬಂದು ಮನವಿ ಮಾಡಿದರು ಬಗ್ಗದ ಪ್ರತಿಭಟನಾ ಮುಂದುವರಿಸಿದರು. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.

ಸ್ಥಳಕ್ಕೆ ಆರ್‌ಎಫ್‌ಒ ಭೇಟಿ:

ರೈತರು ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರ್‌ಎಫ್‌ಒ ರಾಮಕೃಷ್ಣಪ್ಪ ರೈತರ ಸಮಸ್ಯೆಯನ್ನು ಆಲಿಸಿ, ಪ್ರತಿಭಟನೆ ಕೈ ಬೀಡುವಂತೆ ಮನವೊಲಿಕೆಗೆ ಮುಂದಾದರು. ಇದಕ್ಕೆ ಒಪ್ಪದ ಪ್ರತಿಭಟನಾ ನಿರತ ರೈತರು ಕಳೆದ ರಾತ್ರಿ ಕೂಡ ೧೨ಕ್ಕೂ ಹೆಚ್ಚು ಆನೆಗಳು ಹಿಂಡು ದಾಳಿ ಮಾಡಿ ಮೋಟಾರ್ ಪಂಪುಗಳು, ಬೆಳೆ ನಾಶಪಡಿಸಿವೆ. ಪ್ರತಿ ಸಲ ಆನೆ ದಾಳಿಯಾದಾಗ ನೀವು ಬರುವುದು, ಸಬೂಬು ಹೇಳುವುದು, ನಾವೂ ಕೇಳಿಕೊಂಡು ಸುಮ್ಮನಾಗುವುದು, ಮತ್ತೆ ಆನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡುವುದು ಮಾಮೂಲಿಯಾಗಿದೆ. ಇನ್ನಾದರೂ ಈ ಸಮಸ್ಯೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಿ, ನಿಮ್ಮ ಕೈಯಲ್ಲಿ ಆನೆ ಹಾವಳಿ ತಡೆಯಲು ಸಾಧ್ಯವಾಗದಿದ್ದರೆ ನಮಗೆ ಅವಕಾಶ ನೀಡಿ ನಾವೇ ತಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಕರೆಸಿ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಪೊಟೋ೩ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು.