ತುಮಕೂರಲ್ಲಿ 20ಕ್ಕೆ ಬೃಹತ್‌ ಸಮಾವೇಶ - ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ

Published : May 03, 2026, 08:04 AM IST
Siddaramaiah government completes 3 years Preparations for huge convention in Tumkur on the 20th

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೇ 20ಕ್ಕೆ 3 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.  ಈ ನಿಮಿತ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ತಾತ್ಕಾಲಿಕವಾಗಿ ಚಿಂತಿಸಿದ್ದಾರೆ.

 ತುಮಕೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೇ 20ಕ್ಕೆ 3 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಈ ನಿಮಿತ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ತಾತ್ಕಾಲಿಕವಾಗಿ ಚಿಂತಿಸಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ‘ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಸಮಾವೇಶವನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈಗ ಮೇ 20ರಂದೇ ರಾಜ್ಯ ಸರ್ಕಾರಕ್ಕೆ 3 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲೇ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಬುಧವಾರ ನಡೆಯುವ ಸಮಾವೇಶಕ್ಕೆ ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿದ್ದು, ರಾಜ್ಯಾದ್ಯಂತ ಆಗಮಿಸುವ ಫಲಾನುಭವಿಗಳಿಗಾಗಿ 4 ಸಾವಿರ ಬಸ್‌ಗಳ ಅಗತ್ಯವಿರುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಅಭೂತಪೂರ್ವ ಯಶಸ್ವಿ ಯೋಜನೆಗಳ ಅನುಷ್ಠಾನ ಮತ್ತಿತರ ಇಲಾಖೆಗಳ ಪ್ರಗತಿ ದರ್ಶನ ಕುರಿತ ವಸ್ತುಪ್ರದರ್ಶನ ನಡೆಯಲಿದ್ದು, ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಪಟ್ಟಿ, ಶಂಕುಸ್ಥಾಪನೆ ಅಥವಾ ಉದ್ಘಾಟನೆ ಆಗಬೇಕಿರುವ ಮಾಹಿತಿ ಹಾಗೂ ಶಿಲಾನ್ಯಾಸ ಫಲಕಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಕ್ಷಣ ಒದಗಿಸಬೇಕು ಎಂದು ಸೂಚಿಸಿದರು.

ಜವಾಬ್ದಾರಿ ಹಂಚಿಕೊಳ್ಳಿ:

ಬೃಹತ್ ಸಮಾವೇಶಕ್ಕೆ ರಾಜ್ಯಾದ್ಯಂತ ಫಲಾನುಭವಿಗಳು ಆಗಮಿಸುವುದರಿಂದ ಅವರಿಗೆ ಆಸನ ವ್ಯವಸ್ಥೆ, ಊಟ, ಸಾರಿಗೆ, ಇತ್ಯಾದಿ ವ್ಯವಸ್ಥೆಗಳನ್ನು ಯಾವುದೇ ಲೋಪವಿಲ್ಲದಂತೆ ನಿಭಾಯಿಸಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಉಪಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚುವಂತೆ ಸಚಿವರು ಸೂಚಿಸಿದರು.

ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ?:

ಸಮಾವೇಶಕ್ಕೆ ಬಹುತೇಕ ಎಲ್ಲಾ ಸಚಿವರು, ಶಾಸಕರು, ಸಂಸದರೂ ಆಗಮಿಸಲಿದ್ದು, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ತಾತ್ಕಾಲಿಕವಾಗಿ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾರಂಭದ ವೇದಿಕೆ, ಫಲಾನುಭವಿಗಳಿಗೆ ಊಟದ ವ್ಯವಸ್ಥೆ, ವಸ್ತುಪ್ರದರ್ಶನ ಹಾಗೂ ಹೆಲಿಪ್ಯಾಡ್ ನಿರ್ಮಾಣ ಕುರಿತು ಜಿಲ್ಲಾಡಳಿತ ತುರ್ತಾಗಿ ಯೋಜನೆ ರೂಪಿಸಬೇಕಿದೆ. ಅಲ್ಲದೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೊಳ್ಳಲಿರುವ ಇಲಾಖೆ ಕಟ್ಟಡಗಳ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಬೇಕು. ಅವರು ಶಿಲಾನ್ಯಾಸ ಫಲಕಗಳ ಜಾಗ ಮತ್ತಿತರ ವ್ಯವಸ್ಥೆಯನ್ನು ಮಾಡಿಕೊಳ್ಳಲಿದ್ದಾರೆ ಎಂದು ಪರಮೇಶ್ವರ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಅಧಿಕಾರಿಗಳು ಉಪಸ್ಥಿತರಿದ್ದರು.

3ರ ಸಂಭ್ರಮದಲ್ಲೇನು?

- ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಸಮಾವೇಶದಲ್ಲಿ ಭಾಗಿ

- ಫಲಾನುಭವಿಗಳಿಗಾಗಿ ರಾಜ್ಯದ ವಿವಿಧೆಡೆಯಿಂದ 4000 ಬಸ್‌ಗಳ ವ್ಯವಸ್ಥೆ

- ಸರ್ಕಾರದ 3 ವರ್ಷದ ಸಾಧನೆ ವಿವರಿಸಲು ವಿವಿಧ ಇಲಾಖೆಗಳ ವಸ್ತುಪ್ರದರ್ಶನ

- ಅಂದು ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿಪೂಜೆ

- ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ: ಉಸ್ತುವಾರಿ ಸಚಿವ ಪರಂ ಸೂಚನೆ

PREV
Stay updated with the latest news from Tumkur district (ತುಮಕೂರು ಸುದ್ದಿ) — local politics, development, infrastructure, social issues, crime, environment and community affairs in the district on Kannada Prabha News.
Read more Articles on

Recommended Stories

ದಲಿತರಿಗೆ ದೇವಾಲಯ ಪ್ರವೇಶಕ್ಕೆ ಆಕ್ಷೇಪಿಸಿದವನಿಗ ಜೈಲು
ವಿದ್ಯುತ್ ಸಮಸ್ಯೆ ಮುಂದುವರಿದರೆ ಬೃಹತ್‌ ಪ್ರತಿಭಟನೆ