;Resize=(412,232))
ವಿಜಯಪುರ : ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಸೂರ್ಯನ ಸುತ್ತ ಬಂಗಾರದ ಬಣ್ಣದಲ್ಲಿ ಉಂಗುರಾಕಾರ ಕಂಡುಬಂದಿದ್ದು, ಈ ವಿಸ್ಮಯ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸೂರ್ಯನ ಸುತ್ತಲು ಉಂಗುರಾಕಾರ ಕಂಡು ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಸಂಭ್ರಮಿಸಿದರು. ಪ್ರಕೃತಿ ವಿಸ್ಮಯವನ್ನು ಮಕ್ಕಳಿಗೆ ತೋರಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ ಅವರು ಈ ಕುರಿತು ಅಗತ್ಯ ಜ್ಞಾನ ನೀಡಿದರು.
ವಾತಾವರಣದ ಮೇಲ್ಭಾಗದಲ್ಲಿರುವ ನೀರಿನ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು (Refraction) ಈ ರೀತಿಯ ‘ಸನ್ ಹ್ಯಾಲೋ (Sun Halo) ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ. ಈ ಉಂಗುರದ ಒಳಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಹೊರಭಾಗವು ತಿಳಿ ನೀಲಿ ಬಣ್ಣವನ್ನು ಹೊಂದಿರುತ್ತದೆ. ಇದು ಸೂರ್ಯನ ಸುತ್ತ 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತದೆ ಎಂದು ಪರಮೇಶ್ವರ ಗುದ್ಯಾಳ ಅವರು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಮಳೆ ಸೂಚನೆ: ಹವಾಮಾನ ಮುನ್ಸೂಚನೆಯ ಪ್ರಕಾರ, ಇಂತಹ ಸೂರ್ಯನ ಉಂಗುರಗಳು ಕಾಣಿಸಿಕೊಂಡರೆ ಮುಂದಿನ ಕೆಲವೇ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುತ್ತದೆ.