ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡ ಸರ್ವೇ ನಡೆಸುವ ಧರ್ಮ ಸಂಕಷ್ಟಕ್ಕೆ ಸಿಲುಕಿರುವ ವಲಯ ಹಾಗೂ ವಾರ್ಡ್ ಮಟ್ಟದ ಅಧಿಕಾರಿಗಳು ಈವರೆಗೆ ಕೇವಲ 2,500 ಕಟ್ಟಡಗಳನ್ನು ಮಾತ್ರ ಗುರುತಿಸಿದ್ದಾರೆ.
ಕಳೆದ ತಿಂಗಳು ಮಹದೇವಪುರದ ಬಾಬುಸಾಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿತದಿಂದ 9 ಮಂದಿ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ನಗರದ ಎಲ್ಲ ನಿರ್ಮಾಣ ಹಂತದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಒಂದು ವಾರದಲ್ಲಿ ಗುರುತಿಸಿ ವರದಿ ನೀಡುವಂತೆ ಬಿಬಿಎಂಪಿಯ ಎಲ್ಲಾ 8 ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.ಬಿಬಿಎಂಪಿಯು ಅ.28ರಿಂದ ಅಧಿಕೃತವಾಗಿ ಸರ್ವೇ ಕಾರ್ಯ ಆರಂಭಿಸಿದ್ದು, ಈಗಾಗಲೇ 2 ವಾರ ಪೂರ್ಣಗೊಂಡಿದೆ. ಈವರೆಗೆ ಬಿಬಿಎಂಪಿಯ 8 ವಲಯದಲ್ಲಿ ಕೇವಲ 2,562 ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಎಂದಷ್ಟೇ ಪತ್ತೆ ಮಾಡಲಾಗಿದೆ.
ಅಧಿಕಾರಿಗಳ ನಿರಾಸಕ್ತಿ:ಸ್ಥಳೀಯ ರಾಜಕೀಯ, ಹೊಂದಾಣಿಕೆಯಡಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ಅಧಿಕಾರಿಗಳು ಇದೀಗ ಧರ್ಮ ಸಂಕಷ್ಟಕ್ಕೆ ಒಳಗಾಗಿ ಸರ್ವೇ ಕಾರ್ಯ ನಡೆಸಬೇಕಾಗಿದೆ. ಹೀಗಾಗಿ, ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಎಂಬ ಆರೋಪಗಳು ಕೇಳಿಬರುತ್ತಿವೆ.ಇದಕ್ಕೆ ಪೂರಕವಾಗಿ ಪ್ರತಿ ದಿನ ವಲಯವಾರು ಸರ್ವೇ ಕಾರ್ಯ ನಡೆಸಿದ ಅಂಕಿ ಅಂಶವನ್ನು ಕೇಂದ್ರ ಕಚೇರಿ ಸಲ್ಲಿಸಬೇಕೆಂದು ಸೂಚಿಸಿದರೂ. ಕಳೆದ ಎರಡ್ಮೂರು ದಿನದಿಂದ ಒಂದೆರಡು ವಲಯದಿಂದ ವರದಿ ಸಲ್ಲಿಕೆ ಮಾಡುತ್ತಿಲ್ಲ. ಇನ್ನುಳಿದ ವಲಯದಲ್ಲಿ ಏನೋ ಒಂದು ಅಂಕಿ ಸಂಖ್ಯೆಯನ್ನು ಕೇಂದ್ರ ಕಚೇರಿ ನೀಡಲಾಗುತ್ತಿದೆ. ಇದರಿಂದ ಸರ್ವೇ ಕಾರ್ಯ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬ ಸ್ಪಷ್ಟ ಮಾಹಿತಿಯೂ ಲಭ್ಯವಾಗುತ್ತಿಲ್ಲ ಎಂದು ಕೇಂದ್ರ ಕಚೇರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.
ದಕ್ಷಿಣದಲ್ಲಿ ಕೇವಲ 142 ಅಕ್ರಮ ಕಟ್ಟಡ: ಬಿಬಿಎಂಪಿಯ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ವಾರ್ಡ್‌ಗಳಿವೆ. ಆದರೂ, ದಕ್ಷಿಣ ವಲಯದಲ್ಲಿ ಈವರೆಗೆ 142 ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ. ಉಳಿದಂತೆ ಕಟ್ಟಡ ದುರಂತ ನಡೆದ ಮಹದೇವಪುರ ವಲಯದಲ್ಲಿ ಮಾತ್ರ ಅತಿ ಹೆಚ್ಚು 528 ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಗುರುತಿಸಲಾಗಿದೆ.ಸಿಎಂ-ಡಿಸಿಎಂ ಸೂಚನೆಯೂ ಲೆಕ್ಕಕ್ಕಿಲ್ಲ: ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ ವೇಳೆ ಯಾವುದೇ ಅಕ್ರಮ ಅಥವಾ ಅನಧಿಕೃತ ಕಟ್ಟಡ ನಿರ್ಮಾಣ ಮುಂದುವರಿದರೆ ವಲಯ ಆಯುಕ್ತ ಸೇರಿ ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ಪ್ರಭಾವಕ್ಕೂ ಒಳಗಾಗಬಾರದು. ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ಸಮೀಕ್ಷೆ ನಡೆಸಿ 1 ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದರೂ. ಆದರೆ, ಯಾವ ಸೂಚನೆಗೂ ಸ್ಥಳೀಯ ಮಟ್ಟದಲ್ಲಿ ಮನ್ನಣೆ ನೀಡಲಾಗಿಲ್ಲ. ಒಂದು ವಾರವಲ್ಲ, ಎರಡು ವಾರ ಪೂರ್ಣಗೊಂಡರೂ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ.
ವಲಯವಾರು ಗುರುತಿಸಲಾದ ಅಕ್ರಮ ಕಟ್ಟಡ ವಿವರವಲಯಕಟ್ಟಡ ಸಂಖ್ಯೆ
ಮಹದೇವಪುರ528ಯಲಹಂಕ167ದಾಸರಹಳ್ಳಿ348ಪೂರ್ವ446ದಕ್ಷಿಣ142ಪಶ್ಚಿಮ328ಬೊಮ್ಮನಹಳ್ಳಿ275ಆರ್ ಆರ್ ನಗರ328ಒಟ್ಟು2,562