ಬೈಕ್‌ಗೆ ಬಿಎಂಟಿಸಿ ಬಸ್‌ ತಾಗಿತೆಂದು ಸುತ್ತಿಗೆಯಿಂದ ಬಸ್ಸಿನ ಗಾಜಿಗೆ ಒಡೆದ

| Published : Nov 13 2024, 01:32 AM IST

ಬೈಕ್‌ಗೆ ಬಿಎಂಟಿಸಿ ಬಸ್‌ ತಾಗಿತೆಂದು ಸುತ್ತಿಗೆಯಿಂದ ಬಸ್ಸಿನ ಗಾಜಿಗೆ ಒಡೆದ
Share this Article
  • FB
  • TW
  • Linkdin
  • Email

ಸಾರಾಂಶ

ಬೈಕ್‌ಗೆ ಬಿಎಂಟಿಸಿ ಬಸ್‌ ತಾಕಿತು ಎಂಬ ಕಾರಣಕ್ಕೆ ಬಸ್ಸನ್ನು ಅಡ್ಡಗಟ್ಟಿ ಗಾಜು ಒಡೆದು ದಾಂಧಲೆ ಮಾಡಿದ ಆರೋಪದಡಿ ಬೈಕ್‌ ಸವಾರನೊಬ್ಬನನ್ನು ಎಸ್‌.ಜೆ.ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೈಕ್‌ಗೆ ಬಿಎಂಟಿಸಿ ಬಸ್‌ ತಾಕಿತು ಎಂಬ ಕಾರಣಕ್ಕೆ ಬಸ್ಸನ್ನು ಅಡ್ಡಗಟ್ಟಿ ಗಾಜು ಒಡೆದು ದಾಂಧಲೆ ಮಾಡಿದ ಆರೋಪದಡಿ ಬೈಕ್‌ ಸವಾರನೊಬ್ಬನನ್ನು ಎಸ್‌.ಜೆ.ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಾಸಿಪಾಳ್ಯ ನಿವಾಸಿ ಮುಜಾಹಿದ್‌(34) ಬಂಧಿತ ಸವಾರ. ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಕಾರ್ಪೊರೇಶನ್‌ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಬಿಎಂಟಿಸಿ ಚಾಲಕ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿರುವ ಆರೋಪಿ ಮುಜಾಹಿದ್‌, ಕಾರ್ಪೊರೇಷನ್‌ ಕಡೆಯಿಂದ ಪುರಭವನದ ಕಡೆಗೆ ಬೈಕ್‌ನಲ್ಲಿ ಬರುವಾಗ ಅದೇ ಮಾರ್ಗದಲ್ಲಿ ಬಂದ ಬಿಎಂಟಿಸಿ ಬಸ್‌, ಬೈಕ್‌ಗೆ ತಾಕಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಮುಜಾಹಿದ್‌, ಬಿಎಂಟಿಸಿ ಬಸ್‌ ಚಾಲಕನ ಕಡೆಗೆ ಕೈ ತೋರಿಸಿ ನಿಂದಿಸಿದ್ದಾನೆ. ಪ್ರತಿಯಾಗಿ ಬಿಎಂಟಿಸಿ ಬಸ್‌ ಚಾಲಕ ಸಹ ನಿಂದಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಮುಜಾಹಿದ್‌, ಕಾರ್ಪೊರೇಷನ್‌ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್‌ ಅಡ್ಡಗಟ್ಟಿ ಸುತ್ತಿಗೆಯಿಂದ ಬಸ್‌ನ ಮುಂಭಾಗದ ಗಾಜಿಗೆ ಹೊಡೆದು ಧ್ವಂಸ ಮಾಡಿದ್ದಾನೆ. ಈ ವೇಳೆ ಗಾಜಿನ ಚೂರುಗಳು ಬಸ್‌ನ ಚಾಲಕನಿಗೂ ಚುಚ್ಚಿ ಗಾಯಗಳಾಗಿವೆ.

ಬಸ್‌ನ ನಿರ್ವಾಹಕ ಹಾಗೂ ಪ್ರಯಾಣಿಕರು ಮುಜಾಹಿದ್‌ನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ವಶಕ್ಕೆ ಆತನನ್ನು ಒಪ್ಪಿಸಿದ್ದಾರೆ. ಘಟನೆ ಸಂಬಂಧ ಬಿಎಂಟಿಸಿ ಬಸ್‌ ಚಾಲಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಬಿಎಂಟಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನ: ಮತ್ತೊಂದು ಪ್ರಕರಣದಲ್ಲಿ ಬನಶಂಕರಿ ಬಸ್‌ ನಿಲ್ದಾಣದ ಬಳಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೊಬ್ಬ ಜಾಕ್‌ ರಾಡ್‌ನಿಂದ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಬಿಎಂಟಿಸಿ ಬಸ್‌ ಚಲಿಸುವಾಗ ಆಟೋ ಚಾಲಕ ಅಡ್ಡ ಬಂದಿದ್ದಾನೆ. ಇದರಿಂದ ಕೋಪಗೊಂಡ ಬಸ್‌ ಚಾಲಕ ಬೈದಿದ್ದಾನೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಜಾಕ್‌ ರಾಡ್‌ನಿಂದ ಬಸ್‌ನ ಗಾಜು ಒಡೆಯಲು ಮುಂದಾಗಿದ್ದಾನೆ. ಚಾಲಕನ ಮೇಲೆ ಹಲ್ಲೆಗೆ ಸಹ ಯತ್ನಿಸಿದ್ದಾನೆ. ಅಷ್ಟರಲ್ಲಿ ಪ್ರಯಾಣಿಕರು ಆಟೋ ಚಾಲಕನನ್ನು ಹಿಡಿದು ಸಮಾಧಾನಪಡಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.