ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಲಹಂಕ ಮೇಲ್ಸೇತುವೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಹಾಗೂ ಇನೋವಾ ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.ಬಾದಾಮಿ ಮೂಲದ ಇನ್ನೋವಾ ಕಾರು ಚಾಲಕ ಜಗದೀಶ್(40) ಮತ್ತು ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಕುಲದೀಪ್ ಕುಮಾರ್ (42) ಮೃತ ದುರ್ದೈವಿಗಳು. ಘಟನೆಯಲ್ಲಿ ಬಿಎಂಟಿಸಿ ಬಸ್ ಚಾಲಕ ಪುಟ್ಟಸ್ವಾಮಿಗೂ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಣಿ ಅಪಘಾತದಲ್ಲಿ ಬಿಎಂಟಿಸಿ ಬಸ್, ಸಿಮೆಂಟ್ ಮಿಕ್ಸರ್ ಲಾರಿ ಹಾಗೂ ಇನ್ನೋವಾ ಕಾರು ಜಖಂಗೊಂಡಿವೆ.
ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಾಲೀಕನನ್ನು ಮನೆಗೆ ಕರೆತರಲು ಸೋಮವಾರ ರಾತ್ರಿ ಸುಮಾರು 11.30ಕ್ಕೆ ಚಾಲಕ ಜಗದೀಶ್ ಯಲಹಂಕ ಮೇಲ್ಸೇತುವೆ ಮುಖಾಂತರ ಇನ್ನೋವಾ ಕಾರಿನಲ್ಲಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದರು. ಇದೇ ಮಾರ್ಗದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಕಾರು ಚಾಲಕ ಮತ್ತು ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಮೇಲ್ಸೇತುವೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಜಗಳವಾಡುತ್ತಿದ್ದರು.ಲಾರಿ-ಕಾರು ನಡುವೆ ಸಿಲುಕಿ ಗಂಭೀರ ಗಾಯ: ಇದೇ ವೇಳೆ ರಾಜರಾಜೇಶ್ವರಿನಗರದಿಂದ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ನಿಂತು ವಾಗ್ವಾದ ನಡೆಸುತ್ತಿದ್ದ ಚಾಲಕರಾದ ಜಗದೀಶ್ ಮತ್ತು ಕುಲದೀಪ್ ಕುಮಾರ್ ಲಾರಿ ಮತ್ತು ಕಾರಿನ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾದ ಹಿನ್ನೆಲೆ ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಕುಲದೀಪ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋವಾ ಕಾರು ಚಾಲಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಬಿಎಂಟಿಸಿ ಬಸ್ ಚಾಲಕ ಪುಟ್ಟಸ್ವಾಮಿಗೂ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಮತ್ತು ಇನ್ನೋವಾ ಕಾರು ಚಾಲಕ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಜಗಳವಾಡುತ್ತಿದ್ದರು. ಈ ವಾಹನಗಳು ನಿಂತಿದ್ದ ಜಾಗದಲ್ಲಿ ಕತ್ತಲು ಆವರಿಸಿತ್ತು. ಹೀಗಾಗಿ ಬಿಎಂಟಿಸಿ ಬಸ್ ಚಾಲಕ ಈ ವಾಹನಗಳನ್ನು ಸರಿಯಾಗಿ ಗಮನಿಸದೆ ಡಿಕ್ಕಿ ಹೊಡೆದ ಪರಿಣಾಮ ಈ ಸರಣಿ ಅಪಘಾತ ಸಂಭವಿಸಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))